Friday, November 27, 2020

ರವಿಗ್ರಹದಶಾಭುಕ್ತಿಫಲಗಳು.

 ರವಿದಶಾ  ರವಿಭುಕ್ತಿ  (ವರ್ಷ೦ - ಮಾಸ ೩ -ದಿನ ೧೮)

ದ್ವಿಜಭೂಪತಿಶಸ್ತ್ರಾದ್ಯೈರ್ಧನಪ್ರಾಪ್ತಿಂ ಮನೋರುಜಮ್ ।

ವಿದೇಶವನಸಂಚಾರಂ ಭಾನೋರಂತರ್ಗತೇ ರವೌ ।। 


ರವಿದಶಾ ರವಿಭುಕ್ತಿಯಲ್ಲಿ ಬ್ರಾಹ್ಮಣವರ್ಗದವರಿಂದ, ಬ್ರಾಹ್ಮಣ ಕರ್ಮಾಚರಣೆಯಿಂದ, ರಾಜನಿಂದ, ರಾಜಸೇವೆಯಿಂದ, ಶಸ್ತ್ರವ್ಯವಹಾರದಿಂದ ಧನಲಾಭವು, ಮನೋರೋಗವು, ವಿದೇಶ ಗಮನ ಕಾಡುಬೆಟ್ಟಗಳಲ್ಲಿ ಅಲೆದಾಡುವಿಕೆ ಇತ್ಯಾದಿ ಫಲವು. ಈ ಭುಕ್ತಿಫಲದಲ್ಲಿ ಎಲ್ಲ ಆಚಾರ್ಯರ ಅಭಿಪ್ರಾಯವನ್ನು ಚುಟುಕಾಗಿ ವಿವರಿಸುವ ವೈದ್ಯನಾಥರ ಮೂಲಶ್ಲೋಕವಿದೆ. ಸ್ವಭುಕ್ತಿ ಉತ್ತಮ ಫಲದಾಯಕವಲ್ಲ. ಅತ್ಯಂತ ಶುಭದಾಯಕನಾಗಿದ್ದರೆ, ಶುಭಾಶುಭ ಮಿಶ್ರಫಲವು. ಯಶೋವಂತ ತಂದೆಗೆ ಅನಿಷ್ಟಕಾರಿ, ಕಾಡುಬೆಟ್ಟಗಳಲ್ಲಿ ಅಲೆದಾಡುತ್ತಿರುತ್ತಾನೆಂದು ಮಂತ್ರೇಶ್ವರರೆಂದರು. ಪರಾಶರರು ರವಿಯು ಉಚ್ಚಾದಿ ಬಲಯುತನಾಗಿದ್ದರೆ- ಧನಧಾನ್ಯಾದಿ ಲಾಭ, ಬಲಹೀನನಾಗಿದ್ದರೆ- ಧನಧಾನ್ಯಾದಿ ನಾಶವೆಂದರು. ರವಿದಶಾ ರವಿಭುಕ್ತಿ ದೋಷ ಪರಿಹಾರಕ್ಕೆ - ರುದ್ರಾಭಿಷೇಕ, ಸೂರ್ಯನಮಸ್ಕಾರ, ಮೃತ್ಯುಂಜಯ ಜಪ, ಪೂಜಾ ಹೋಮ, ಆದಿತ್ಯ ಹೃದಯ ಪಠನವು. ಈ ಭುಕ್ತಿಫಲ ಚಿಂತಿಸುವಾಗ- ಚುಟುಕಿನಲ್ಲಿ ಫಲ ಹೇಳಿದರು. ಭುಕ್ತಿನಾಥನಿರುವ ರಾಶಿಶೀಲ, ಆತನಿರುವ ಭಾವಕಾರಕ ಮುಂತಾದ ಸರ್ವವನ್ನೂ ಚಿಂತಿಸಿ ಫಲ ಹೇಳಬೇಕು. 


ರವಿದಶಾ ಚಂದ್ರಭುಕ್ತಿ (೧-೬-೦) 


ಬಂಧುಮಿತ್ರಜನೈರರ್ಥಂ ಪ್ರಮಾದಂ ಮಿತ್ರಸಜ್ಜನೈ:। 

ಪಾಂಡುರೋಗಾದಿಸಂತಾಪಂ ಚಂದ್ರೇ ಭಾನುದಶಾನ್ತರೇ।। 

ರವಿದಶಾ ಚಂದ್ರಭುಕ್ತಿಯಲ್ಲಿ - ಬಂಧುಮಿತ್ರರಿಂದ ಅರ್ಥಲಾಭವು. ಆದರೆ ಮಿತ್ರರಾದ ಸಜ್ಜನರಿಂದ ಪ್ರಮಾದ ಸಂಭವಿಸುವುದು. ಪಾಂಡುರೋಗಾದಿ ಸಂತಾಪಕರ ಘಟನೆಗಳಿವೆ. (ರಿಪುನಾಶ, ವ್ಯಸನ ಪರಿಹಾರ, ಧನಲಾಭ, ಕೃಷಿಪ್ರವೃತ್ತಿ , ಗೃಹಸಲಕರಣೆ ಒಟ್ಟುಗೂಡಿಸುವುದು, ಕ್ಷಯರೋಗ ಸಂಭವ, ನೂತನ ಗೃಹ ನಿರ್ಮಾಣ, ಜಲಭಯ, ವಾತಕೋಪ, ಚಂದ್ರನ ಬಲಾಬಲ ನೋಡಿ ಈ ಫಲ ವ್ಯತ್ಯಾಸವರಿಯಬೇಕು. ಬೃಹತ್ಪಾರಾಶರ. - ಚಂದ್ರನು ಬಲಿಷ್ಠನಾದರೆ- ವಿವಾಹಾದಿ ಶುಭ ಪ್ರವೃತ್ತಿ , ಧನ, ಧಾನ್ಯ, ಪಶು, ವಾಹನ, ಕೃಷಿಕ್ಷೇತ್ರ (ಗದ್ದೆ) ಸುಖ ಪುತ್ರಾದಿ ಲಾಭ, ಪತ್ನೀಸುಖ, ರಾಜ್ಞೀಪ್ರಸಾದ, ಚಂದ್ರನು- ಕ್ಷೀಣ, ಬಲಹೀನನಾದರೆ- ಪತ್ನೀಪುತ್ರ ಪೀಡೆ, ಭೃತ್ಯನಾಶ, ಕಾರ್ಯಹಾನಿ, ರಾಜಕಲಹ, ವಿವಾದ, ಚಂದ್ರನು ೬-೮-೧೨ರಲ್ಲಿದ್ದರೆ- ಜಲಭೀತಿ, ಮನೋರೋಗ, ಬಂಧನ, ರೋಗ, ಸ್ಥಾನಚಲನೆ, ರವಿಯ೬-೮-೧೨ರಲ್ಲಿ ಭುಕ್ತಿನಾಥ ಚಂದ್ರನಿದ್ದರೆ- ಅಕಾಲ ಭೋಜನ, ದೇಶಸಂಚಾರ, ಕಷ್ಟಫಲವು. ಚಂದ್ರಜಪ ಪೂಜಾ ಹೋಮ, ದೇವೀಪ್ರಾರ್ಥನೆ, ದೇವಿಗೆ ಬಿಳಿ ಪುಷ್ಪಾರ್ಚನೆ ಹಾಲು ಪಾಯಸಾರ್ಪಣೆ ಇತ್ಯಾದಿ ಪರಿಹಾರವು.


ರವಿದಶಾ ಕುಜಭುಕ್ತಿ (0-೪-೬) 


ರತ್ನಕಾಂಚನವಿತ್ತಾಪ್ತಿಂ ರಾಜಸ್ನೇಹಂ ಶುಭಾವಹಮ್ ।

ಪೈತ್ಯರೋಗಾದಿಸಂಚಾರಂ ಕುಜೇ ಭಾನುದಶಾಂತರೇ।।

ರವಿದಶಾ ಕುಜಭುಕ್ತಿಯಲ್ಲಿ - ರತ್ನಗಳು, ಬಂಗಾರ, ಧನ ಇತ್ಯಾದಿ ಪ್ರಾಪ್ತಿ, ರಾಜಸಮಾನರ ಸ್ನೇಹ, ಸರ್ವಶುಭವು, ಪಿತ್ತರೋಗಾದಿ ಸಂಭವ, ಸಂಚಾರ ಇತ್ಯಾದಿ ಫಲ. ಮಂತ್ರೇಶ್ವರರು ಇಬ್ಬರೂ ಪಾಪರಾದುದರಿಂದ ಸ್ವಜನ ವೈರ, ಸ್ಥಾನಭ್ರಂಶ, ರೋಗ, ವ್ರಣಭಯವೆಂದರು. ವೈದ್ಯನಾಥರಂತೆ ಕಲ್ಯಾಣವರ್ಮರು- ಸಂಗ್ರಾಮಜಯಃ ಪ್ರಚಂಡತಾ ಸೌಖ್ಯಂ ಚ ಭವತಿ ಎಂದಿದ್ದಾರೆ. ಪರಾಶರರು - ಕುಜನು ಉಚ್ಚಾದಿ ಬಲಯುತನಾಗಿ - ಲಗ್ನಾತ್ ಕೇಂದ್ರ ತ್ರಿಕೋಣಗಳಲ್ಲಿದ್ದರೆ- ಶುಭಕಾರ್ಯ ಭೂಮಿಲಾಭ, ಕೃಷಿಲಾಭ, ಧನಧಾನ್ಯ, ವೃದ್ಧಿ, ರಕ್ತವಸ್ತುವಾದಿಲಾಭ, ಗೃಹಲಾಭ, ಸೌಖ್ಯ, ರಾಜಪ್ರೀತಿ, ಸಹೋದರರ ಸುಖವು. ಬಲಹೀನ ಕುಜನು ರವಿಯಿಂದ ೮-೧೨ರಲ್ಲಿ ಪಾಪಯುತಿ ದೃಷ್ಟಿಯಲ್ಲಿದ್ದರೆ- ಕ್ರೂರಬುದ್ಧಿ, ಮನೋರೋಗ, ಕಾರಾಗೃಹವಾಸ ಸಂಭವ, ಕರ್ಮನಾಶ, ಸಹೋದರ ಹಾನಿಯು. ಕುಜನು ೨-೭ರ ಅಧಿಪನಾಗಿ ನೀಚನೂ ಆಗಿದ್ದರೆ- ಸರ್ವಸಂಪತ್ತು ರಾಜನಿಂದ ಅಪಹರಿಸಲ್ಪಡಲಿದೆ ಎಂದರು. ಭುಕ್ತಿಫಲ ದೋಷವಿದ್ದರೆ ಪರಿಹಾರಕ್ಕೆ- ಚಂಡಿಕಾ ಪಾರಾಯಣ, ಧನ್ವಂತರೀ ಜಪ,ಪೂಜಾ ಹೋಮ, ದುರ್ಗಾಪೂಜಾ,ಹೋಮ, ರಕ್ತಪುಷ್ಪಾರ್ಚನೆ, ದೇವಿಗೆ ಕುಂಕುಮಾರ್ಚನೆ, ವೇದಪಠನ ಇತ್ಯಾದಿ.


ರವಿದಶಾ- ರಾಹುಭುಕ್ತಿ (೦-೧೦-೨೪) 


ಅಕಾಲೇ ಮೃತ್ಯುಸಂತಾಪಂ ಬಂಧುವರ್ಗಾರಿಪೀಡನಮ್ ।

ಪದಚ್ಯುತಿಂ ಮನೋದುಃಖಂ ರವೇರಂತರ್ಗತೇऽಪ್ಯಹೌ।।  

ರವಿದಶಾ ರಾಹುಭುಕ್ತಿಯಲ್ಲಿ - ಅಕಾಲಮೃತ್ಯು ಸಂಭವ, ದುಃಖ, ಬಂಧುವಿರೋಧ, ಶತ್ರುಪೀಡೆ, ಸ್ಥಾನಚ್ಯುತಿ, ಮನೋದುಃಖವು. ಶತ್ರುಗಳ ಉದಯ, ಧನನಷ್ಟ ವಿಷಭಯ, ಮೂರ್ಛಾದೋಷ , ಶಿರೋನೇತ್ರಾದಿ ರೋಗವು, ಬೃಹತ್ಪಾರಶರ - ಈ ರಾಹು ಕೇಂದ್ರ ತ್ರಿಕೋಣಗತ ನಾಗಿದ್ದರೆ- ಆದಿಯ ೨ ಮಾಸದಲ್ಲಿ ಧನನಷ್ಟ , ಭಯ, ನಂತರ– ಚೋರ, ಶತ್ರು, ವ್ರಣಾದಿ ಪೀಡೆ, ಮಡದಿ ಮಕ್ಕಳಿಗೆ ಕಷ್ಟ , ಒಬ್ಬ ಶುಭನ ಯುತಿ ಯಾ ದೃಷ್ಟಿ ರಾಹುವಿಗಿದ್ದರೆ- ಸುಖಾರಂಭಾದಿಗಳು, ಯೋಗಕಾರಕನ ಯುತಿದೃಷ್ಟಿ ಸಹಿತನಾಗಿ ಲಗ್ನಾತ್ ೩-೬-೧೦-೧ರಲ್ಲಿ ರಾಹುವಿದ್ದರೆ- ದೇಹಸುಖ, ಧನಲಾಭ, ರಾಜಪ್ರೀತಿ, ರವಿಯಿಂದ ಇಷ್ಟಸ್ಥಾನದಲ್ಲಿ ರಾಹುವಿದ್ದರೆ ರಾಜಸನ್ಮಾನಭಾಗ್ಯ ವೃದ್ಧಿ, ಕೀರ್ತಿಲಾಭವು, ಪುತ್ರೋತ್ಸವ, ಮಡದಿ ಮಕ್ಕಳ ಕಿರಿಕಿರಿ ಈ ಭುಕ್ತಿಯಲ್ಲಿ ಆಗಾಗ ತೋರೀತು. ಮನೆಯಲ್ಲಿ ನಿತ್ಯಕಲ್ಯಾಣೋತ್ಸವವಿದೆ. ರವಿಯಿಂದ ೧೨-೮ರಲ್ಲಿ ರಾಹುವಿದ್ದರೆ ಬಂಧನ, ಕಾರಾಗೃಹವಾಸ, ಸ್ಟಾನನಾಶ, ಶತ್ರು, ರೋಗಾದಿ ಪೀಡೆ, ಅತಿಸಾರಾದಿ ದೋಷ, ಪಶುಪೀಡೆ, ಕ್ಷಯ, ೨-೭ರಲ್ಲಿಯೋ ಅದರ ಅಧಿಪರ ಯುತಿಯಲ್ಲೋ ಇದ್ದರೆ- ಸರ್ಪ ಕಡಿತ, ವಿಷಜಂತು ಕಡಿತ, ಮೃತ್ಯುಪ್ರಸಂಗವೂ ಬಂದೀತು. ರಾಹುಜಪ, ಸರ್ಪಪೂಜೆ, ಆಶ್ಲೇಷಾಬಲಿ, ಪಂಚಾಮೃತಾಭಿಷೇಕ, ರಾಹುಶಾಂತಿ, ಉದಕಶಾಂತಿ ಜಪ, ಮನ್ಯುಸೂಕ್ತ ಜಪ,ಹೋಮ.


 ರವಿದಶಾ ಗುರುಭುಕ್ತಿ  (೦-೯-೧೮) 


ಸರ್ವಪೂಜ್ಯಂ ಸುತಾದ್ವಿತಂ ದೇವಬ್ರಾಹ್ಮಣಪೂಜನಮ್ । ಸತ್ಕರ್ಮಾಚಾರಸದ್ಗೋಷ್ಠಿ ರವೇರಂತರ್ಗತೇ ಗುರೌ ।।‌ 

ರವಿದಶಾ ಗುರುಭುಕ್ತಿಯಲ್ಲಿ - ಸರ್ವರಿಂದಲೂ ಪೂಜ್ಯತೆ, ಪುತ್ರರಿಂದ ಧನಲಾಭ, ದೇವಬ್ರಾಹ್ಮಣ ಪೂಜೆ, ಸತ್ಯರ್ಮಾಚರಣೆ, ಸತ್ಸಂಗದ ಸಭೆಯಲ್ಲಿ ಭಾಗವಹಿಸುತ್ತಿರುವುದು ಇತ್ಯಾದಿ ಫಲ. (ಜಾತಕಪಾರಿಜಾತ ,ಫಲ ದೀಪಿಕಾ - ಶತ್ರುನಾಶ, ಧನಲಾಭ, ದೇವಪೂಜೆ, ಕರ್ಣರೋಗ, ರಾಜಯಕ್ಷ್ಮ ಹೀಗೆ ಗೋಪತಿ ದಶಾಯಾಂ ಗಿರಾಂ ಪತಿ ಭುಕ್‌ ಎಂದಿದ್ದಾರೆ. ಗೋಪತಿ- ವೇದಕ್ಕೊಡೆಯ ರವಿ, ಗಿರಾಂಪತಿ= ಮಾತಿಗೆ ಪತಿ ಗುರು, ಸಾರಾವಳಿಯಲ್ಲಿ - "ವ್ಯಾಧಿಭಿರರಿಭಿರ್ವ್ಯಸನೈ: ತಥಾऽಲಕ್ಷ್ಮ್ಯಾ ಚ ವಿಮುಚ್ಯತೇ" ರೋಗ ಶತ್ರು ವ್ಯಸನ ಅಲಕ್ಷ್ಮೀ ವಿರಹಿತನೆಂದರು, ಗುರುಉಚ್ಚ ಮಿತ್ರಾದಿ ವರ್ಗಸ್ಥನಾಗಿ ಕೇಂದ್ರ ತ್ರಿಕೋಣಾದಿ ಇಷ್ಟಸ್ಥಾನದಲ್ಲಿದ್ದರೆ ವಿವಾಹ, ರಾಜದರ್ಶನ, ಧನ, ಧಾನ್ಯ , ಪುತ್ರ , ಸುಖ, ರಾಜಪ್ರಸಾದ, ವಸ್ತ್ರ , ಅಲಂಕಾರ ಇತ್ಯಾದಿ ಲಾಭ, ಬ್ರಾಹ್ಮಣಪ್ರಿಯ ಸನ್ಮಾನ, ಸರ್ವಕಾರ್ಯಸಿದ್ಧಿಯು, ಗುರುವು ೯-೧೦ರ ಈಶನಾಗಿದ್ದರೆ – ರಾಜ್ಯಲಾಭ, ಸ್ಥಾನಾರೋಹಣ, ಮಹಾಸುಖವು. ರವಿಯಿಂದ ಇಷ್ಟ ಸ್ಥಾನಸ್ಥಿತನಾಗಿದ್ದರೆ- ದಾನಧರ್ಮ ಪ್ರವೃತ್ತಿ , ಸುಖಭಾಗ್ಯ ವೃದ್ಧಿ , ಮನಸ್ಸಂತೋಷ, ಗುರುದೇವತಾ ಭಕ್ತಿಯು, ರವಿಯಿಂದ ೬-೮ರಲ್ಲಿ ಬಲಹೀನ ನಾಗಿದ್ದರೆ ದೇಹಪೀಡೆ, ಮಡದಿಮಕ್ಕಳ ಕಷ್ಟ ರಾಜಕೋಪ, ಪಾಪಕರ್ಮ, ಮನೊದುಃಖ, ಧನಹಾನಿಯು, ಪರಿಹಾರಕ್ಕೆ– ಗುರುಜಪ, ವಿಷ್ಣುರುದ್ರಾದಿ ಪ್ರಾರ್ಥನೆ, ಚಂಡಿಕಾಪಾರಾಯಣ, ವಿಷ್ಣುಸಹಸ್ರನಾಮಾರ್ಚನೆ, ಚಣಕಪಾಯಸ ಸಮರ್ಪಣೆ ಇತ್ಯಾದಿ, ರುದ್ರಾಭಿಷೇಕ ಸಹ.


ರವಿದಶಾ ಶನಿಭುಕ್ತಿ (0-೧೧-೧೨)

ಸರ್ವಶತ್ರುತ್ವಮಾಲಸ್ಯಂ ಹೀನವೃತ್ತಿಂ ಮನೋರುಜಮ್ । 

ರಾಜಚೋರಭಯಪ್ರಾಪ್ತಿಂ ರವೇರಂತರ್ಗತೇ ಶನೌ ।। 

ರವಿದಶಾ ಶನಿಭುಕ್ತಿಯಲ್ಲಿ - ಸರ್ವರಲ್ಲಿ ಶತ್ರುತ್ವ , ಆಲಸ್ಯ , ಹೀನಪ್ರವೃತ್ತಿ , ಮನೋರೋಗ, ರಾಜಭಯ, ಚೋರಪೀಡೆಯು. ಜಾ.ಪಾ. (ಫ.ದೀ.- ಧನಹಾನಿ, ಪುತ್ರಚಿಂತೆ, ಪತ್ನೀರೋಗ, ಕುಟುಂಬ ವಿಭಾಗ, ಮಲಿನ ಕಫ ರೋಗವು. ಸಾರಾವಲಿಯಲ್ಲಿ- ಶತ್ರುಹೋರಾಟ, ಸರ್ವಶಕ್ತಿಹ್ರಾಸವೆಂದರು. ಬೃ.ಪಾ – ಉಚ್ಚ ಸ್ವಕ್ಷೇತ್ರ - ಕೇಂದ್ರ ತ್ರಿಕೋಣಾದಿಯುತ ಶನಿಯಾದರೆ- ಗೃಹದಲ್ಲಿ ಮಂಗಲೋತ್ಸವ, ಸತ್ಕರ್ಮಾನುಷ್ಠಾನ, ರಾಜಸನ್ಮಾನ, ಕೀರ್ತಿಭೂಷಣ, ಧನಾದಿ ಲಾಭ, ಧನಧಾನ್ಯ ಸಮೃದ್ಧಿ , ಗೃಹಸುಖಾದಿ ಫಲವು, ರವಿಯಿಂದ೮-೧೨ರಲ್ಲಿ ಅನಿಷ್ಟ ಬಲಹೀನ ಶನಿ ಇದ್ದರೆ- ವಾತಾದಿ ಪೀಡೆ, ಕಾರ್ಯ ಹಾನಿ, ಬಂಧನ, ಧನನಾಶ, ಅಕಸ್ಮಾತ್ ಕಲಹ, ಭೃತ್ಯಕಲಹ, ಭಾರ್ಯಾ ಕಲಹ, ದಾಯಾದ ಕಲಹ, ಮಿತ್ರಹಾನಿ, ಶನಿಯು ಬಲಹೀನನಾಗಿ ೨-೭ರ ಸಂಬಂಧ ಪಡೆದರೆ- ಮಾತಾಪಿತೃ ವಿಯೋಗ, ಅಪಮೃತ್ಯು , ಭಯಸಂಚಾರಾದಿ ಫಲ. ಪರಿಹಾರಕ್ಕೆ- ಕೃಷ್ಣಾಗೋದಾನ, ಮಹಿಷಿದಾನ, ಶನಿಜಪ, ತ್ರಿಮೂರ್ತಿ ಪ್ರಾರ್ಥನೆ, ಅಶ್ವತ್ಥಸೇವೆ, ಮೃತ್ಯುಂಜಯ ಜಪ, ಶನಿಜಪ,ಶನಿಶಾಂತಿ.)


ರವಿದಶಾ ಬುಧಭುಕ್ತಿ (೦-೧೧-೬) 

ಬಂಧುಪೀಡಾಂ ಮನೋದುಃಖಂ ಸನ್ನೋತ್ಸಾಹಂ ಧನಕ್ಷಯಮ್ । 

ಕಿಂಚಿತ್ಸುಖಮವಾಪ್ನೋತಿ ರವೇರಂತರ್ಗತೇ ಬುಧೇ।। 

ರವಿದಶಾ ಬುಧಭುಕ್ತಿಯಲ್ಲಿ - ಬಂಧುಪೀಡೆ, ಮನೋದುಖ, ಉತ್ಸಾಹಹೀನತೆ, ಧನಹಾನಿ, ಸ್ವಲ್ಪ ಸುಖವೂ ಲಭಿಸಿತು. ಜಾ.ಪಾ. (ಕಾಮಾಲೆರೋಗ, ಬೊಕ್ಕೆ ಕಜ್ಜಿ ತುರಿಕೆ, ಜಠರರೋಗ, ವ್ಯರ್ಥ ಮಾತು, ಭೂಮಿನಾಶ, ಭಾರ್ಯಾಪೀಡೆ, ಭಯ, ಕಟಿರೋಗಫಲ. ಫ.ದೀ. ಬೃ.ಪಾ - ಬುಧನು ಉಚ್ಚ ಸ್ವಕ್ಷೇತ್ರಾದಿ ಬಲಯುತನಾಗಿ ಕೇಂದ್ರ ತ್ರಿಕೋಣ ಲಾಭಾದಿ ಇಷ್ಟಭಾವದಲ್ಲಿದ್ದರೆ ರಾಜ್ಯಲಾಭ ಮಹಾ ಉತ್ಸಾಹ, ಮಡದಿ ಮಕ್ಕಳ ಸುಖ, ವಾಹನಲಾಭ, ರಾಜಪ್ರಸಾದ, ಪುಣ್ಯತೀರ್ಥಕ್ಷೇತ್ರಾದಿ ಗಮನ, ಭೂಷಣ ಪ್ರಾಪ್ತಿ , ಗೋಧನ ವೃದ್ಧಿ , ಬುಧನು - ೯-೧೦ನೇ ಭಾವೇಶನೊಡನಿದ್ದರೆ ಲಾಭವೃದ್ಧಿ , ೯-೧೦-೫ರಲ್ಲಿದ್ದರೆ- ಸರ್ವಸನ್ಮಾನ ಸರ್ವಸಮೃದ್ಧಿ , ಶುಭಮಂಗಲ ಧರ್ಮಾಚರಣೆ, ಯಜ್ಞಕರ್ಮ, ತನ್ನ ಹೆಸರಿನ ಪದ್ಯವನ್ನು ಅನ್ಯರು ಪಠಿಸುವುದು,ಇತ್ಯಾದಿ. ರವಿಯಿಂದ ೬-೮-೧೨ರಲ್ಲಿ ಬುಧನು- ನೀಚಾದಿ ಬಲಹೀನತೆಯಲ್ಲಿದ್ದರೆ- ಆತನ ಭುಕ್ತಿಯಲ್ಲಿ – ದಾರಪುತ್ರಾದಿ ಪೀಡೆ, ಸಂಚಾರಭಯ, ದೇಹಪೀಡೆ, ಮನಸ್ತಾಪ, ದುಃಖಪ್ರಸಂಗ, ಬಂಧುಹಾನಿ, ಜ್ವರ ಭಯಾದಿ ಫಲ. ಪರಿಹಾರಕ್ಕೆ - ವಿಷ್ಣುಸಹಸ್ರನಾಮ ಪಾರಾಯಣ, ಅನ್ನದಾನ, ವಿಷ್ಣುಪೂಜೆ, ಸತ್ಯನಾರಾಯಣ ವ್ರತ, ಏಕಾದಶೀ ವ್ರತ, ಸುವರ್ಣದಾನ, ಕ್ಷೀರಾನ್ನ ಸಮರ್ಪಣೆ, ರಜತದಾನ.


ರವಿದಶಾ ಕೇತುಭುಕ್ತಿ (೦-೪-೬)


ಕಂಠರೋಗಂ ಮನಸ್ತಾಪಂ ನೇತ್ರರೋಗಮಥಾಪಿ ವಾ । 

ಅಕಾಲಮೃತ್ಯುಮಾಪ್ನೋತಿ ರವೇರಂತರ್ಗತೇ ಧ್ವಜೇ ।।  


ರವಿದಶಾ ಕೇತುಭುಕ್ತಿಯಲ್ಲಿ- ಕುತ್ತಿಗೆಯಲ್ಲಿ ರೋಗ, ಮನಸ್ತಾಪ, ಕಣ್ಣಿನ ರೋಗ, ಅಕಾಲ ಮೃತ್ಯುಸಂಭವ, ಇತ್ಯಾದಿ ಫಲವು ಜಾ.ಪಾ. ( ಫ.ದೀ. - ರಾಜಕೋಪ, ಮನೋವ್ಯಥೆ, ಸ್ವಜನೋಪದ್ರವ, ಧನನಷ್ಟ , ಪಾದರೋಗ ಶಿರೋರೋಗಾದಿ ಫಲ. ಬೃ.ಪಾ. - ಕೇತು ಲಗ್ನೇಶನೊಡನೆ ಇದ್ದರೆ ಆದಿಯಲ್ಲಿ ಸುಖ, ಮಧ್ಯೇ ಧನನಷ್ಟ , ಅಂತ್ಯದಲ್ಲಿ ಮೃತ್ಯುವಾರ್ತೆ, ರವಿಯಿಂದ ೮-೧೨ರಲ್ಲಿ ಕೇತುವಿದ್ದರೆ ಕೆನ್ನೆ , ಹಲ್ಲು , ಮೂತ್ರರೋಗ, ಸ್ಥಾನಭ್ರಂಶ. ಪಾಪಯೋಗವಿದ್ದರೆ- ಪಿತೃಜನ ಮೃತ್ಯು , ವಿದೇಶಗಮನ, ಶತ್ರುಪೀಡೆ, ಭಯಾದಿಫಲ- ಯೋಗಕಾರಕಯುತನಾಗಿ ಕೇತು. ೩-೬-೧೦ರಲ್ಲಿ ಶುಭಾಂಶಯುತನಾಗಿದ್ದರೆ- ಸೌಖ್ಯ ಸಂತೋಷ, ಲಾಭ, ಯಶೋವೃದ್ಧಿ , ವಿಚಿತ್ರ ವಸ್ತ್ರಾದಿ ಲಾಭ, ಬಂಧುಸೌಖ್ಯ , ವಿಘ್ನನಾಶ, ಸಂಪತ್ಸಮೃದ್ಧಿ ಫಲ. ೨-೭ರ ಅಧಿಪರೊಡನಿದ್ದರೆ ಅಪಮೃತ್ಯು , ಭಯ ಬಂದೀತು, ದೋಷ ಪರಿಹಾರಕ್ಕೆ- ಕೇತುಜಪ, ಪೂಜಾ ಹೋಮ, ಸಪ್ತಶತೀಪಾರಾಯಣ,ಗಣಪತಿಪೂಜೆ, ಹೋಮ, ಗೋದಾನ, ಮೋದಕಾರ್ಪಣೆ ಇತ್ಯಾದಿ. 



ರವಿದಶಾ ಶುಕ್ರಭುಕ್ತಿ (೧-೦-೦) 

ಜಲೇ ದ್ರವ್ಯಾಪ್ತಿಮಾಯಾಸಂ ಕುಸ್ತ್ರೀಜನನಿಷೇವಣಮ್ । ಶುಷ್ಕಸಂವಾದಮಾಪ್ನೋತಿ ರವೇರಂತರ್ಗತೇ ಭೃಗೌ ।।


ರವಿದಶಾಶುಕ್ರಭುಕ್ತಿಯಲ್ಲಿ - ಜಲಮೂಲಕವಾದ ಪ್ರವೃತ್ತಿಯಿಂದ ಧನಪ್ರಾಪ್ತಿ , ಆಯಾಸ, ಕೆಟ್ಟ ಸ್ತ್ರೀಜನ ಸಂಪರ್ಕ, ಪೊಳ್ಳು ಮಾತು, ಇತ್ಯಾದಿ ಫಲ. ಜಾ.ಪಾ. (ಫ ದೀ – ಶಿರೋರೋಗ, ಉದರವೇದನೆ ಕೃಷಿನಾಶ, ಗೃಹಧನಾದಿ ನಷ್ಟ . ಮಡದಿಮಕ್ಕಳಿಗೆ ದುಖ, ರವಿ ಶುಕ್ರರು ವಿರುದ್ಧ ಗ್ರಹರಾದುದರಿಂದ ಮಂತ್ರೇಶ್ವರರು ಹೀಗೆ ಗೃಹ ಧನಾದಿ ನಷ್ಟ ಹೇಳಿದರು.) - ಶುಕ್ರನು ಕೆಂದ್ರ ತ್ರಿಕೋಣ ಲಾಭಗಳಲ್ಲಿ ಉಚ್ಚಾದಿ ಬಲಯುತನಾಗಿದ್ದರೆ- ಸುಖ, ಭೋಗ, ಗ್ರಾಮಾಂತರ ಪ್ರಯಾಣ, ಪ್ರಭುಬ್ರಾಹ್ಮಣಾದಿ ಸಂದರ್ಶನ, ಸುಖ , ರಾಜ್ಯಲಾಭ, ಮಹೋತ್ಸಾಹ, ಕಲ್ಯಾಣ, ಮೃಷ್ಟಾನ್ನ ಭೋಜನ, ರತ್ನಲಾಭ, ಧನಧಾನ್ಯ ವೃದ್ಧಿ , ವಾಹನಲಾಭ, ಕೀರ್ತಿಸಂಪದಭಿವೃದ್ಧಿ ಇತ್ಯಾದಿ ಶುಭವು, ರವಿಯಿಂದ ೬-೮-೧೨ರಲ್ಲಿ ಶುಕ್ರನು ಬಲಹೀನನಾಗಿದ್ದರೆ ರಾಜಕೋಪ, ಪುತ್ರ ಸ್ತ್ರೀ ಧನಾದಿ ನಾಶ, ಭುಕ್ತಿ ಮಧ್ಯದಲ್ಲಿ ಲಾಭ, ಶುಭ ಸ್ವಲ್ಪ ತೋರೀತು. ಅಂತ್ಯದಲ್ಲಿ ಸ್ಥಾನಭ್ರಂಶ, ಯಶೋನಾಶಫಲವು. ಶುಕ್ರನು ೭ ನೇ ಭಾವೇಶ ಮಾತ್ರನಾಗಿದ್ದರೆ - ರೋಗಾದಿ ಭಯವು. ರವಿಯಿಂದ೮-೧೨ರಲ್ಲೂ ಇದ್ದರೆ- ಮೃತ್ಯುಭಯವು, ಸಾರಾವಳಿಯಲ್ಲಿ ದೇಶತ್ಯಾಗ ಸಂಭವವೆಂದರು. ಪರಿಹಾರಕ್ಕೆ– ಶುಕ್ರಜಪ, ಲಕ್ಷ್ಮೀಹೃದಯ ಪಾರಾಯಣ, ಚಂಡಿಕಾ ಪಾರಾಯಣ, ಶ್ರೀಸೂಕ್ತಪಠನ, ದುರ್ಗಾನಮಸ್ಕಾರ, ಸುವರ್ಣದಾನ, ಶ್ರೀಸೂಕ್ತ ಹೋಮ, ಭಾಗ್ಯ ಸೂಕ್ತ ಪಠನ ಇತ್ಯಾದಿಯು.

No comments:

Post a Comment