Saturday, November 28, 2020

ಚಂದ್ರಗ್ರಹದಶಾಭುಕ್ತಿಫಲಗಳು.

 

ಚಂದ್ರದಶಾ ಚಂದ್ರಭುಕ್ತಿ (೦-೧೦-೦)

ವಿದ್ಯಾಸ್ತ್ರೀಗೀತವಾದ್ಯೇಷ್ವಭಿರತಿಶಮನಂ ಪಟ್ಟವಸ್ತ್ರಾದಿಸಿದ್ಧಿಂ 

ಸತ್ಸಂಗಂ ದೇಹಸೌಖ್ಯಂ ನೃಪಸಚಿವಚಮೂನಾಯಕೈ:ಪೂಜ್ಯಮಾನಮ್ । 

ಸತ್ಕೀರ್ತಿಂ ತೀರ್ಥಯಾತ್ರಾಂ ವಿತರತಿ ಹಿಮಗುಃ ಪುತ್ರಮಿತ್ರೈ: ಪ್ರಿಯಂ ಚ

ಕ್ಷೋಣೀಗೋವಾಜಿಲಾಭಂ ಬಹುಜನವಿಭವಂ ಸ್ವೇದಶಾಂತರ್ವಿಪಾಕೇ।।

ಚಂದ್ರದಶಾ ಚಂದ್ರಭುಕ್ತಿಯಲ್ಲಿ ವಿದ್ಯಾಲಾಭ, ಸುಖ, ವಾದ್ಯಸಂಗೀತಾದಿ ಪ್ರೀತಿ, ಶಾಂತಿ, ವಿವಿಧ ಪಟ್ಟೆವಸ್ತ್ರಾದಿ ಲಾಭ, ಸಜ್ಜನಸಂಗ, ದೇಹಸುಖ, ರಾಜಮಂತ್ರಿ ಸೇನಾಧಿಪರಿಂದ ಸಂಪೂಜನೆ, ಸತ್ಕೀರ್ತಿ,ತೀರ್ಥಯಾತ್ರೆ , ಪುತ್ರಮಿತ್ರಾದಿಗಳಿಂದ ಪ್ರೀತಿ, ಭೂಮಿ, ಪಶು, ಕುದುರೆ ಇವುಗಳ ಲಾಭ, ಬಹುಜನ ಸನ್ಮಾನ, ಧನವೈಭವ ಇತ್ಯಾದಿ ಫಲವು. ಜಾ.ಪಾ.(ಫ.ದೀ – ಬ್ರಾಹ್ಮಣ ಸನ್ಮಾನ, ತಾಯಿಯಿಂದ ಸುಖ, ಸ್ತ್ರೀಜನಸುಖ, ಪ್ರಜಾ ಲಾಭಫಲವು. ಬೃ.ಪಾ. - ಚಂದ್ರನು ಉಚ್ಚ ಸ್ವಕ್ಷೇತ್ರಾದಿ ಇಷ್ಟಸ್ಥಾನಗಳಲ್ಲಿ ಕೇಂದ್ರ ತ್ರಿಕೋಣಾದಿ ಇಷ್ಟಭಾವಸ್ಥಿತಿ, ೯-೧೦ ಭಾವೇಶರ ಯುತಿ, ಹೀಗೆ ಪೂರ್ಣನಾಗಿಯೂ ಇದ್ದರೆ ರಾಜ್ಯಲಾಭ, ಪರಮಸುಖ, ಭಜನೆ, ಸತ್ಕೀರ್ತಿ, ಸೇನಾಪತಿತ್ವ , ದೇವತಾಭಕ್ತಿ , ಗುರುಭಕ್ತಿ , ಆನೆಕುದುರೆವಸ್ತ್ರಾದಿ ಸರ್ವಸಿದ್ದಿ ಸುಖಫಲವು. ಬಲಹೀನನಾಗಿ ಚಂದ್ರನು ಕ್ಷೀಣನಾಗಿ ಪಾಪಯುತನಾಗಿ ನೀಚಾದಿಯಲ್ಲಿ ೬-೧೨ರಲ್ಲೂ ಇದ್ದರೆ - ಧನಸ್ಥಾನಾದಿ ನಾಶ, ದೇಹಾಲಸ್ಯ , ಮನಸ್ತಾಪ, ರಾಜ ಮಂತ್ರಿ ವಿರೋಧ, ತಾಯಿಗೆ ಅರಿಷ್ಟ , ಬಂಧನ, ಮನೋದುಖ, ಬಂಧುನಾಶಫಲವು. ೮-೧೨ರ ಅಧಿಪರೊಡಗೂಡಿಯೋ ೨-೭ರ ಅಧಿಪನೋ ಆಗಿದ್ದರೆ - ರೋಗ, ಅಪಮೃತ್ಯುಭಯವು.) ಇದರಲ್ಲಿ ಕಷ್ಟಪರಿಹಾರಕ್ಕೆ- ದೇವೀ ಆರಾಧನೆ ಸುಪ್ತಶತೀ, ಚಂದ್ರಗ್ರಹ ಜಪ, ಪೂಜಾ, ಹೋಮ, ಮೃತ್ಯುಂಜಯ ಜಪ,ಪೂಜಾ,ಹೋಮ. ಚಂಡಿಕಾಪಾರಾಯಣ, ಲಲಿತಾರ್ಚನೆ, ದೀಪನಮಸ್ಕಾರ, ಕುಲದೇವತಾ ಸಂದರ್ಶನ ಇತ್ಯಾದಿ. ಲಕ್ಷ್ಮೀಹೃದಯ ಮಂತ್ರ ಹೋಮ.



ಚಂದ್ರದಶಾ ಕುಜಭುಕ್ತಿ (೦-೭-೦)

ರೋಗಂ ವಿರೋಧಬುದ್ಧಿಂ ಚ ಸ್ಥಾನನಾಶಂ ಧನಕ್ಷಯಮ್ । 

ಮಿತ್ರಭ್ರಾತೃವಶಾತ್ ಕ್ಲೇಶಂ ಚಂದ್ರಸ್ಯಾಂತರ್ಗತೇ ಕುಜೇ ।।

ಚಂದ್ರದಶಾ ಕುಜಭುಕ್ತಿಯಲ್ಲಿ - ರೋಗ, ವಿರೋಧ, ಬುದ್ಧಿನಾಶ, ಸ್ಥಾನನಷ್ಟ (ಗೃಹ, ಅಧಿಕಾರ, ಭೂಮಿ), ಧನವ್ಯಯ, ಮಿತ್ರರಿಂದ ಸಹೋದರರಿಂದ ದು:ಖ ಇತ್ಯಾದಿ ಫಲವು. ಜಾ.ಪಾ. ( ಫ.ದೀ. - ಪಿತ್ತ ಉಷ್ಣ ಅಗ್ನಿ ರಕ್ತ ಇವುಗಳಿಂದ ರೋಗ, ಶತ್ರುಚೋರಾದಿ ಭಯ, ವ್ಯಸನ, ದುಃಖ, ಧನಹಾನಿ, ಮಾನಹಾನಿಯು. ಬೃ ಪಾ - ಬಲಿಷ್ಠ ಕುಜನು ಲಗ್ನಾತ್ಕೇಂದ್ರ ತ್ರಿಕೋಣಗಳಲ್ಲಿದ್ದರೆ - ಸಂಪತ್ಸೌಭಾಗ್ಯಾದಿವೃದ್ಧಿ , ರಾಜಸನ್ಮಾನ, ವಸ್ತ್ರಾಭರಣ ಭೂಷಣಾದಿ ಲಾಭ, ಯತ್ನಕಾರ್ಯ ಸಿದ್ದಿ , ಗೃಹ, ಕೃಷಿಕ್ಷೇತ್ರಾದಿ ವೃದ್ಧಿ , ವ್ಯಾಪಾರ ಜಯಾದಿ ಫಲವು. ಉಚ್ಚ ಸ್ವಕ್ಷೇತ್ರಗಳಲ್ಲೂ ಇದ್ದರೆ– ಮಹಾಸೌಖ್ಯ , ಸರ್ವಸಿದ್ಧಿಯು. ಪಾಪಯುತ ಕುಜನು ೮-೧೨ರಲ್ಲಿದ್ದು ಚಂದ್ರನಿಂದಲೂ ಕೆಟ್ಟ ಸ್ಥಾನದಲ್ಲಿದ್ದರೆ ರೋಗಪೀಡೆ, ಗೃಹಹಾನಿ, ಕೃಷಿಹಾನಿ, ವ್ಯಾಪಾರನಷ್ಟ , ಕೆಲಸದವರಲ್ಲಿ ಕಲಹ, ನಿತ್ಯನಿಷ್ಠುರ ಮಾತು, ಹಾನಿ ಇತ್ಯಾದಿ. ೨-೭-೮ರ ಅಧಿಪನಾಗಿ ೮ ರಲ್ಲಿದ್ದರೆ- ಮಹಾ ಅನಿಷ್ಟದಾಯಕನು. ಅವಗಡಾದಿ ಸೂಚಕನು.) ಭುಕ್ತಿದೋಷ ಪರಿಹಾರಕ್ಕೆ- ಸಪ್ತಶತೀ ಪಾರಾಯಣ, ಚಂಡಿಕಾಹವನ, ದುರ್ಗಾಹೋಮವು, ತೊಗರಿದಾನ, ಅಂಗಾರಕಗ್ರಹ ಜಪ,ಪೂಜಾ,ಹವನ ಇತ್ಯಾದಿ ಪ್ರಾಯಶ್ಚಿತ್ತದಿಂದ ದೋಷಪರಿಹಾರವೆಂದಿದ್ದಾರೆ.



ಚಂದ್ರದಶಾ ರಾಹುಭುಕ್ತಿ (೧-೬-೦)

ರಿಪುರೋಗಭಯಾತ್ ಕ್ಲೇಶಂ ಬಂಧುನಾಶಂ ಧನಕ್ಷಯಮ್ । 

ನ ಕಿಂಚಿತ್ಸುಖಮಾಪ್ನೋತಿ ರಾಹೌ ಚಂದ್ರದಶಾಂತರೇ ।।

ಚಂದ್ರದಶಾ ರಾಹುಭುಕ್ತಿಯಲ್ಲಿ - ಶತ್ರುಭಯ, ರೋಗಪೀಡೆ, ದು:ಖ, ಬಂಧುನಾಶ, ಧನಹಾನಿ, ಸ್ವಲ್ಪವೂ ಸುಖವಿಲ್ಲದವನಾಗುತ್ತಾನೆ. ಜಾ.ಪಾ. (ಫ ದೀ- ವಾತರೋಗ, ಅನ್ನಪಾನಾದಿ ದೋಷದಿಂದ ಜ್ವರಾದಿ ಪೀಡೆ, ಶತ್ರುವೃದ್ಧ್ಯಾದಿ ಮಹಾ ದೋಷವು.) ಬೃ.ಪ.- ರಾಹು ಕೇಂದ್ರ ತ್ರಿಕೋಣಗಳಲ್ಲಿದ್ದರೆ- ಭುಕ್ತಿ ಆರಂಭದಲ್ಲಿ ಸುಖ ಸಿಕ್ಕಿದರೂ ಆಮೇಲೆ ಶತ್ರು , ಚೋರ, ಸರ್ಪ, ಪಶು, ಇತ್ಯಾದಿಯಿಂದ ಬಹುವಿಧದ ಆಪತ್ತು , ರಾಜಭಯ, ಬಂಧುಮಿತ್ರಾದಿ ನಾಶ, ಮಾನಹಾನಿ, ಮನೋವ್ಯಥೆ ಇತ್ಯಾದಿ. ರಾಹು - ೩-೬-೧೦-೧೧ರಲ್ಲಿ ಶುಭಯುತಿ ದೃಷ್ಟಿಯಲ್ಲಿದ್ದರೆ- ಯೋಗಕಾರಕನ ಸಂಬಂಧವಿದ್ದರೆ- ಸರ್ವಕಾರ್ಯ ಸಿದ್ಧಿ , ನೈಋತ್ಯ ಪಶ್ಚಿಮಭಾಗದಿಂದ ರಾಜ ಸನ್ಮಾನ, ವಾಹನಲಾಭ, ವಸ್ತ್ರಾದಿ ಭೂಷಣ ಪ್ರಾಪ್ತಿ , ಇಷ್ಟಕಾರ್ಯ ಸಿದ್ಧಿಯು. ಬಲಹೀನ ರಾಹು ಚಂದ್ರಾತ್  ೮-೧೨ರಲ್ಲಿದ್ದರೆ - ಸ್ಥಾನಭ್ರಂಶ, ಮನೋದು:ಖ, ಪುತ್ರದು:ಖ, ಮಹಾಭಯ, ಪತ್ನಿ ಪೀಡೆ, ರೋಗಪೀಡೆ, ಹಾವು ಚೇಳು ಮುಂತಾದ ಜಂತುಭಯ, ರಾಜಚೋರಾದಿ ಭೀತಿ, ಇತ್ಯಾದಿ. ಚಂದ್ರನ ಕೇಂದ್ರ ತ್ರಿಕೋಣ ೩-೧೧ರಲ್ಲಿ ರಾಹುವಿದ್ದರೆ - ತೀರ್ಥಯಾತ್ರೆ ಪುಣ್ಯಸಂಚಯ, ದೇವತಾ ಸಂದರ್ಶನ, ಧರ್ಮಪ್ರವೃತ್ತಿ ಇತ್ಯಾದಿ. ಬಲಹೀನ ರಾಹು ೨-೭ ರಲ್ಲಿದ್ದರೆ- ಭುಕ್ತಿಕಾಲದಲ್ಲಿ ದೇಹಾಪತ್ತು ಇದೆ. ದೋಷ ಪರಿಹಾರಕ್ಕೆ ನಾಗಪೂಜೆ ರಾಹುಜಪ,ಹೋಮ,ಸುವರ್ಣದಾನ, ಶತರುದ್ರಜಪಾಭಿಷೇಕ,ರುದ್ರಹೋಮ ಇತ್ಯಾದಿಯಿಂದ ದೋಷ ಪರಿಹಾರವು. 



ಚಂದ್ರದಶಾ ಗುರುಭುಕ್ತಿ (೧-೪-೦)

ಯಾನಾದಿವಿವಿಧಾರ್ಥಾಪ್ತಿಂ  ವಸ್ತ್ರಾಭರಣಸಂಪದಃ । ಯತ್ನಾತ್ಕಾರ್ಯಮವಾಪ್ನೋತಿ ಜೀವೇ ಚಂದ್ರದಶಾಂತರೇ ।।

ಚಂದ್ರದಶಾ ಗುರುಭುಕ್ತಿಯಲ್ಲಿ ವಿವಿಧ ರೀತಿಯಿಂದ ಅರ್ಥಲಾಭ, ವಾಹನಲಾಭ, ವಸ್ತ್ರಾಭರಣಾದಿ ಸಂಪತ್ಸಮೃದ್ಧಿ , ಯತ್ನ ಕಾರ್ಯ ಜಯ, ಜಾ.ಪಾ (ಫ.ದೀ – ದಾನಧರ್ಮ ಪ್ರವೃತ್ತಿ , ಸೌಖ್ಯ , ಭೂಷಣ, ಲಾಭ, ರಾಜಸನ್ಮಾನಫಲ),ಬೃ.ಪಾ – ಗುರುವು ಲಗ್ನಾತ್ಕೇಂದ್ರ ತ್ರಿಕೋಣ ಸ್ವಕ್ಷೇತ್ರ ಉಚ್ಚ ಲಾಭ ಇತ್ಯಾದಿ ರೀತಿಯಲ್ಲಿದ್ದರೆ- ಚಂದ್ರನಿಂದ ಇಷ್ಟಸ್ಥಾನದಲ್ಲೂ ಇದ್ದರೆ- ರಾಜ್ಯ ಲಾಭ, ನಿತ್ಯೋತ್ಸವ, ರಾಜಮೂಲಾದ್ಧನಾಗಮ, ಇಷ್ಟದೇವತಾನುಗ್ರಹ, ಸಂತಾನಸುಖ, ನಿತ್ಯ ಲಕ್ಷ್ಮೀಕಟಾಕ್ಷ ವೃದ್ಧಿ , ಮನೆಯಲ್ಲಿ ನಿತ್ಯೋತ್ಸವವು, ಭೂಮ್ಯಾದಿ ಸರ್ವ ವಿಧದ ಲಾಭ, ಗುರುವು ನೀಚಾಸ್ತಾದಿಯುತನಾಗಿ ೬-೮-೧೨ರಲ್ಲಿದ್ದು ಚಂದ್ರನಿಂದಲೂ ಅನಿಷ್ಟ ಸ್ಥಾನದಲ್ಲಿದ್ದರೆ- ಅಶುಭ ದರ್ಶನ, ಗುರುಜನ ಹಾನಿ, ಪುತ್ರಹಾನಿ, ಸ್ಥಾನಭ್ರಂಶ, ಮನೋದುಃಖ, ಅಕಸ್ಮಾತ್ಕಲಹ, ವಾಹನ, ಮನೆ, ಭೂಮ್ಯಾದಿ ನಾಶ. ಚಂದ್ರನಿಂದ ಗುರುವು ಕೇಂದ್ರತ್ರಿಕೋಣ ಲಾಭ ತೃತೀಯದಲ್ಲಿದ್ದರೆ- ಸರ್ವಸುಖ, ಸಂಪತ್ತು , ಧೈರ್ಯ, ಲಾಭ, ಪರಾಕ್ರಮ, ಯಜ್ಞ , ವ್ರತ, ವಿವಾಹ, ರಾಜ್ಯಶ್ರೀ ಸಿದ್ಧ್ಯಾದಿ ಫಲವು. ಚಂದ್ರನು ೬-೮-೧೨ರಲ್ಲಿದ್ದರೆ- ಬಲಹೀನ ಗುರುವಾಗಿದ್ದರೆ ಕೆಟ್ಟ ಸಂತಾನ, ಕೆಟ್ಟ ಭೋಜನ, ವಿದೇಶ ಸಂಚಾರ. ೨-೭ರ ಅಧಿಪನು ಗುರುವಾಗಿದ್ದರೆ- ಅಪಮೃತ್ಯು ಭಯವು. ಪರಿಹಾರಕ್ಕೆ - ಶಿವಸಹಸ್ರನಾಮ, ವಿಷ್ಣುಸಹಸ್ರನಾಮ ವೇದಾದಿ ಪಾರಾಯಣ, ಗುರುಜಪ, ವಿಷ್ಣುಪ್ರಾರ್ಥನೆ, ಸುವರ್ಣದಾನ ಇತ್ಯಾದಿಯು. ಒಬ್ಬರು ವೈಷ್ಣವ ಮಂತ್ರ ಹೋಮವೆಂದಿದ್ದಾರೆ.


ಚಂದ್ರದಶಾ ಶನಿಭುಕ್ತಿ (೧-೭-೦)

ಮಾತೃಪೀಡಾ ಮನೋದುಃಖಂ ವಾತಪೈತ್ಯಾದಿಪೀಡನಮ್ ।      ಸ್ತಬ್ಧವಾಗರಿಸಂವಾದಂ                                      ಶನೌ ಚಂದ್ರದಶಾಂತರೇ ।।

ಚಂದ್ರದಶಾ ಶನಿಭುಕ್ತಿಯಲ್ಲಿ ತಾಯಿಗೆ ಕಷ್ಟ , ಮನೋದು:ಖ, ವಾತಪಿತ್ತ ದೋಷದಿಂದ ದೇಹ ಪೀಡೆ, ವಾಗ್ಬಂಧನ, ಶತ್ರುಕಲಹ ಜಾ.ಪಾ (ಫ.ದೀ – ವಿವಿಧ ರೋಗಗಳು, ದು:ಖಗಳು, ಬಂಧುಪುತ್ರ ಭಾರ್ಯಾದಿ ಪೀಡೆ, ದೊಡ್ಡದೊಡ್ಡ ವ್ಯಸನಕಾರಕ ಪ್ರಸಂಗಗಳು, ಮರಣಭಯಾದಿ ಫಲ.) ಬೃ.ಪಾ - ಶನಿಯು ಸ್ವ - ಉಚ್ಚ , ಸ್ವಾಂಶ, ಕೇಂದ್ರ , ತ್ರಿಕೋಣ, ಲಾಭ, ಶುಭಯುತಿದೃಷ್ಟಿ , ಇತ್ಯಾದಿಯಲ್ಲಿದ್ದರೆ- ಶೂದ್ರ ಪ್ರಭು, ಸಂಪಲ್ಲಾಭ, ಪುತ್ರಮಿತ್ರ ಅರ್ಥಾದಿಲಾಭ, ಕೃಷಿ ಆದಾಯ, ವ್ಯವಸಾಯ ಭೂಮ್ಯಾದಿ ವೃದ್ಧಿ , ರಾಜಾನುಗ್ರಹ, ವೈಭವ, ಕಲ್ಯಾಣ, ಪುತ್ರಲಾಭಾದಿ ಫಲವು. ಶನಿಯು ಬಲಹೀನನಾಗಿ ನೀಚಾದಿ ಸ್ಥಿತನಾಗಿ, -೬-೮-೧೨ರಲ್ಲಿದ್ದರೆ- ತೀರ್ಥಕ್ಷೇತ್ರಗಳ ಸಂಚಾರ ಅನೇಕ ಜನರಿಂದ ವಿವಿಧ ಕಷ್ಟ , ಶಸ್ತ್ರಭಯ, ಸರ್ವವಿಧದ ಆಪತ್ತು . ಚಂದ್ರನಿಂದ ಕೇಂದ್ರ ತ್ರಿಕೋಣಗಳಲ್ಲಿ ಶನಿ ಬಲಿಷ್ಠನಾಗಿದ್ದರೆ ಸ್ವಲ್ಪ ಧನಾದಿ ಸುಖವಿದ್ದರೂ ಮಡದಿ ಮಕ್ಕಳ ವಿರೋಧ ಬಂದೀತು. ೨-೮-೭ರಲ್ಲಿ ಶನಿ ಇದ್ದರೆ ದೇಹಾಪತ್ತು ಬರುವುದು, ದೋಷ ಪರಿಹಾರಕ್ಕೆ- ಮೃತ್ಯುಂಜಯ ಜಪ, ಶನಿಜಪ, ತ್ರಿಮೂರ್ತಿ ಪ್ರಾರ್ಥನೆ, ಗೋಸೇವೆ, ಕಪ್ಪುದನ ದಾನ, ಮೃತಸಂಜೀವಿನೀ ಜಪ ಇತ್ಯಾದಿ. 


ಚಂದ್ರದಶಾ ಬುಧಭುಕ್ತಿ (೧-೫-೦) 

ಮಾತೃವರ್ಗಾದ್ಧನಪ್ರಾಪ್ತಿಂ ವಿದ್ವಜ್ಜನಸಮಾಶ್ರಯಮ್। 

ವಸ್ತ್ರಭೂಷಣಸಂಪ್ರಾಪ್ತಿಂ ಬುಧೇ ಚಂದ್ರದಶಾಂತರೇ ।।

ಚಂದ್ರದಶಾ ಬುಧಭುಕ್ತಿಯಲ್ಲಿ ಮಾತೃವರ್ಗದಿಂದ ಧನಪ್ರಾಪ್ತಿ , ವಿದ್ವಾಂಸರಲ್ಲಿ ಬೆರೆಯುವಿಕೆ,ವಸ್ತಾಲಂಕಾರ ಆಭರಣಾದಿ ಪ್ರಾಪ್ತಿಫಲವು. ಜಾ.ಪಾ.(ಫ.ದೀ. - ಧನಲಾಭ ಹಸ್ತ್ಯಶ್ವಾದಿಪಶುಲಾಭ, ಸೌಖ್ಯ , ಸಂಪತ್ಸಮೃದ್ಧಿ , ಬುದ್ಧಿವಿಕಾಸಾದಿ ಫಲವು.) ಬೃ.ಪಾ.- ಬುಧನು ಲಗ್ನಾತ್ ಕೇಂದ್ರ ತ್ರಿಕೋಣ ಲಾಭಾದಿಗಳಲ್ಲಿ ಉಚ್ಚ ಸ್ವಮಿತ್ರ ಕ್ಷೇತ್ರ , ಅಂಶಾದಿಯುತನಾಗಿ ಬಲಿಷ್ಠನಿದ್ದರೆ ವಿದ್ಯಾವಿನೋದಾದಿ ಸಭಾರಂಜನೆ, ರಾಜಮಾನ್ಯತೆ (ರಾಜಸಮಾನರು), ಧನ, ಅಲಂಕಾರ, ಜ್ಞಾನ, ಸಂತಾನ, ಸತ್ಸಂಗ ವ್ಯಾಪಾರ, ವಾಹನ, ಗೃಹ, ಇತ್ಯಾದಿ ಲಾಭ ವೃದ್ಧಿಯು. ಚಂದ್ರನಿಂದ ಕೇಂದ್ರ , ತ್ರಿಕೋಣ ೧೧-೨ ಇವುಗಳಲ್ಲಿದ್ದರೆ ವಿವಾಹಸಿದ್ದಿ , ಯಜ್ಞದೀಕ್ಷೆ , ದಾನಧರ್ಮ, ಶುಭಪ್ರವೃತ್ತಿ , ವಿದ್ವಜ್ಜನಮನ್ನಣೆ, ಉನ್ನತ ವ್ಯಕ್ತಿಗಳ ಪ್ರೀತಿ, ಆರೋಗ್ಯ , ಸೋಮಪಾನಾದಿ ಶುಭವು. ಬುಧನು ನೀಚಾದಿ ಬಲಹೀನನಾಗಿ ಚಂದ್ರನಿಂದ ೬-೮-೧೨ರಲ್ಲಿದ್ದರೆ ದೇಹಪೀಡೆ, ಕೃಷಿ ಪಶು ಭೂಮ್ಯಾದಿ ನಷ್ಟ , ಮಡದಿ ಮಕ್ಕಳ ಪೀಡೆ, ಕಾರಾಗೃಹ ಬಂಧನ, ಯೋಗಾದಿಗಳು. ಬುಧನು ೨-೭ರ ಅಧಿಪನಾಗಿದ್ದರೆ- ಜ್ವರಪೀಡಾದಿ ಮಹಾ ಭಯ ಪ್ರಸಂಗಗಳು, ಭುಕ್ತಿದೋಷ ಪರಿಹಾರಕ್ಕೆ - ಸುವರ್ಣ ರಜತ ದಾನ, ಧನ್ವಂತರೀ ಜಪ, ಪೂಜಾ, ಹೋಮ, ಬುಧಗ್ರಹಜಪ,ಪೂಜಾ,ಹೋಮ,ಚಂಡಿಕಾ ಪಾರಾಯಣ,ಆಯುಷ್ಯಹೋಮ,ಉದಕಶಾಂತಿ ಪಾರಾಯಣ.



ಚಂದ್ರದಶಾ ಕೇತುಭುಕ್ತಿ (೧-೭-೦)

ಸ್ತ್ರೀರೋಗಂ ಬಂಧುನಾಶಂ ಚ ಕುಕ್ಷಿರೋಗಾದಿಪೀಡನಮ್ । ದ್ರವ್ಯನಾಶಮವಾಪ್ನೋತಿ ಕೇತೌ‌ ಚಂದ್ರದಶಾಂತರೇ ।।

ಚಂದ್ರದಶಾ ಕೇತುಭುಕ್ತಿಯಲ್ಲಿ - ಸ್ತ್ರೀ ಮೂಲಾತ್ ರೋಗ, ಬಂಧುನಾಶ, ಉದರರೋಗ ದ್ರವ್ಯನಾಶಾದಿ ಫಲವು. ಜಾ.ಪಾ. (ಫ.ದೀ – ಮನಶ್ಚಂಚಲ, ಧನವ್ಯಯ, ಜಲಭಯ, ಭೃತ್ಯಜನನಾಶ, ದಾನಶೂನ್ಯತೆಯು. ಬೃ.ಪಾ - ಕೇತು ಬಲಯುತನಾಗಿ ಇಷ್ಟಭಾವದಲ್ಲಿದ್ದರೆ- ಧನಲಾಭ, ಮಹಾಸೌಖ್ಯ , ಸ್ತ್ರೀಪುತ್ರಾದಿ ಸುಖ, ಭುಕ್ತಿಯ ಆದಿಯಲ್ಲಿ ಧನಹಾನಿ, ಮಧ್ಯೆ ಸುಖ, ಅಂತ್ಯ ಕಷ್ಟ , ಚಂದ್ರನ ಕೇಂದ್ರ ತ್ರಿಕೋಣದಲ್ಲಿ ಕೇತುವಿದ್ದರೆ- ಸೌಖ್ಯ , ಧನವೃದ್ಧಿ , ಗೋಮಹಿಷ್ಯಾದಿ ಲಾಭವು. ಚಂದ್ರನ ೮-೧೨-೬ರಲ್ಲಿ ಕೇತುವು ಪಾಪಯುತಿ ದೃಷ್ಟಿಯಲ್ಲಿದ್ದರೆ- ಶತ್ರುಗಳಿಂದ ಕಾರ್ಯಹಾನಿ, ಅಕಸ್ಮಾತ್ ಕಲಹ, ೨-೭ರಲ್ಲಿ ಕೇತುವಿದ್ದರೆ - ರೋಗಾದ್ಯನರ್ಥಗಳಿಂದ ಮಹಾಭಯವು. ಪ್ರಾಯಶ್ಚಿತ್ತ - ಗಣಪತಿ ಪೂಜೆ, ಹೋಮ, ಕೇತುಜಪ, ನೀಚಾನ್ನದಾನವು, ದೇವೀಪೂಜೆ.



ಚಂದ್ರದಶಾ ಶುಕ್ರಭುಕ್ತಿ (೧-೮-೦) 

ಸ್ತ್ರೀಧನಂ ಕೃಷಿಪಶ್ವಾದಿಜಲವಸ್ತ್ರಾಗಮಂ ಸುಖಮ್ ।

ಮಾತೃರೋಗಮವಾಪ್ನೋತಿ ಭೃಗೌ ಚಂದ್ರದಶಾಂತರೇ ।। 

ಚಂದ್ರದಶಾ ಶುಕ್ರಭುಕ್ತಿಯಲ್ಲಿ - ಸ್ತ್ರೀ ಮೂಲಾದ್ಧನ ಪ್ರಾಪ್ತಿ , ಕೃಷಿ, ಪಶು, ಜಲಾದಿಯಿಂದ ಲಾಭ, ವಸ್ತ್ರಾದಿ ಲಾಭ, ತಾಯಿಗೆ ರೋಗವು, ಜಾ.ಪಾ. (ಫ ದೀ - ನೌಕಾದಿಯಿಂದ ಲಾಭ, ಆಭರಣ, ಕೃಷಿ, ವ್ಯಾಪಾರಾದಿ ಲಾಭ, ಪುತ್ರಮಿತ್ರ ಪಶು ಧಾನ್ಯಾದಿ ವೃದ್ಧಿ.) ಬೃ.ಪಾ- ಬಲಿಷ್ಠ ಶುಕ್ರನು ಇಷ್ಟ ಸ್ಟಾನಸ್ಥಿತನಾಗಿದ್ದರೆ– ರಾಜಾಶ್ರಯ, ರಾಜ್ಯಲಾಭ, ವಾಹನ, ವಸ್ತ್ರ , ಅಲಂಕಾರ ಪ್ರಾಪ್ತಿ , ಪಶು, ವೃದ್ಧಿ , ಪಪುತ್ರಾದಿ ಸುಖ, ನೂತನ ಗೃಹ ನಿರ್ಮಾಣ, ಸುಗಂಧಪುಷ್ಪ ಮಾಲ್ಯಾದಿ ವೈಭವ, ಮೃಷ್ಟಾನ್ನಭೋಜನ, ಸ್ತ್ರೀಸುಖ, ಆರೋಗ್ಯ ಸಂಪದಭಿವೃದ್ಧಿಯು, ಚಂದ್ರ ಶುಕ್ರರು ಒಟ್ಟಿಗೆ ಇದ್ದರೆ ದೇಹಸುಖ, ಕೀರ್ತಿ ಸಂಪತ್ಸಮೃದ್ಧಿಯು, ಶುಕ್ರನು ನೀಚ ಅಸ್ತಾದಿ ಪಾಪಯುತಿದೃಷ್ಟನಾಗಿದ್ದರೆ- ಭೂಮಿ, ಸ್ತ್ರೀ , ಪುತ್ರ , ಭಾರ್ಯಾ, ಪಶು ಇತ್ಯಾದಿ ಹಾನಿ, ರಾಜವಿರೋಧವು. ದ್ವಿತೀಯದಲ್ಲಿ ಶುಕ್ರನು ಉಚ್ಛಾದಿ ಬಲಯುತನಿದ್ದರೆ- ನಿಧಿ ದ್ರವ್ಯ ಪ್ರಾಪ್ತಿ , ಭೂ, ಸಂತಾನ ಭಾಗ್ಯಾದಿ ವೃದ್ಧಿ . ದೇವ ಬ್ರಾಹ್ಮಣ ಭಕ್ತಿ , ಮುತ್ತುರತ್ನಾದಿ ಲಾಭ, ಚಂದ್ರನಿಂದ ೧೧ ರಲ್ಲಿ ಶುಕ್ರನಿದ್ದರೆ- ಕೇಂದ್ರ , ತ್ರಿಕೋಣದಲ್ಲಿ (ಚಂದ್ರನಿಂದ)ದ್ದರೆ- ಗೃಹ ಕ್ಷೇತ್ರಾದಿ ಸರ್ವಸಮೃದ್ಧಿ , ಮಹಾವೈಭವ ಜೀವನವು ಚಂದ್ರನಿಂದ ೬-೮-೧೨ರಲ್ಲಿ ಪಾಪಯುತಿ ದೃಷ್ಟಿಯಲ್ಲಿ ಶುಕ್ರನಿದ್ದರೆ - ವಿದೇಶವಾಸ, ದು:ಖ, ಚೋರಭಯ, ಮೃತ್ಯುಭಯ. ೨-೭ರ ಅಧಿಪನಾಗಿದ್ದರೆ ( ಶುಕ್ರನು ) ಅಪಮೃತ್ಯುಭಯವು. ಪ್ರಾಯಶ್ಚಿತ್ತ- ಶುಕ್ರಜಪ , ದುರ್ಗಾಹೋಮ, ಗೋದಾನ, ದೇವೀ ಆರಾಧನೆ, ಲಲಿತಾರಾಧನೆ, ಸಪ್ತಶತೀ, ಶ್ರೀಸೂಕ್ತ ಹೋಮ, ಸಪ್ತಶತೀ ಪಾರಾಯಣ,ಹವನ,ದೋಷದ ಪ್ರಾಬಲ್ಯ ದೌರ್ಬಲ್ಯ ನೋಡಿ ಪ್ರಾಯಶ್ಚಿತ್ತವು.



ಚಂದ್ರದಶಾ ರವಿಭುಕ್ತಿ (೦-೬-೦)

ನೃಪಪ್ರಾಯಕಮೈಶ್ಚರ್ಯಂ ವ್ಯಾಧಿನಾಶಂ ರಿಪುಕ್ಷಯಮ್ । ಸೌಖ್ಯಂ ಶುಭಮವಾಪ್ನೋತಿ ರವೌ ಚಂದ್ರದಶಾಂತರೇ ।।

ಚಂದ್ರದಶಾ ರವಿಭುಕ್ತಿಯಲ್ಲಿ ರಾಜನಿಂದ (ಸಮಾನರಿಂದ) ಐಶ್ವರ್ಯ ಪ್ರಾಪ್ತಿ , ರೋಗ ನಾಶ, ಶತ್ರುಕ್ಷಯ ಸೌಖ್ಯ , ಶುಭಾದಿ ಫಲವು, ಚಾ.ಪಾ (ಫ.ದೀ– ರಾಜನ ಸಮಾನತೆ, ಶೂರತನ, ವಾತಪಿತ್ತ ರೋಗಾದಿ ಫಲ.) ಬೃ.ಪಾ – ರವಿ ಉಚ್ಚಾದಿ ಬಲಯುತನಾಗಿ ಕೇಂದ್ರ ತ್ರಿಕೋಣಾದಿ ಇಷ್ಟಸ್ಥಾನದಲ್ಲಿದ್ದರೆ - ೨-೩ರಲ್ಲೂ ಇದ್ದರೆ ನಷ್ಟವಾದ ರಾಜ್ಯ ಧನಾದಿ ಲಾಭ, ಮನೆಯಲ್ಲಿ ಕಲ್ಯಾಣೋತ್ಸವ, ಮಿತ್ರರಿಂದ ರಾಜಸಮಾನರಿಂದ ಭೂಮ್ಯಾದಿ ಲಭ, ಪತ್ನಿಗೆ ಗರ್ಭಾಧಾನ, ಸಂಪತ್ಸಮೃದ್ಧಿ. ಭುಕ್ತಿ ಅಂತ್ಯದಲ್ಲಿ ಜ್ವರಾದಿ ಪೀಡೆ, ರವಿಯು ಚಂದ್ರನಿಂದ ೮-೧೨ರಲ್ಲಿದ್ದರೆ- ಪಾಪಯುತನಾಗಿ ೨-೭ರ ಅಧಿಪನಾಗಿದ್ದರೆ-ರಾಜ ಚೋರ ರೋಗಾದಿ ಭಯ, ವಿದೇಶಗಮನ, ನಿಷ್ಫಲತೆ, ಕಷ್ಟಫಲ. ಪ್ರಾಯಶ್ಚಿತ್ತ- ಶಿವಪೂಜೆ, ಶತರುದ್ರಾಭಿಷೇಕ,ರುದ್ರಹೋಮ,ದುರ್ಗಾಪೂಜೆ,ಹೋಮ, ಸೂರ್ಯನಮಸ್ಕಾರ, ಆದಿತ್ಯ ಜಪ, ದೀಪನಮಸ್ಕಾರ, ಇತ್ಯಾದಿ ಪ್ರಾಯಶ್ಚಿತ್ತದಿಂದ ಭುಕ್ತಿದೋಷ ಪರಿಹಾರವು.






Friday, November 27, 2020

ರವಿಗ್ರಹದಶಾಭುಕ್ತಿಫಲಗಳು.

 ರವಿದಶಾ  ರವಿಭುಕ್ತಿ  (ವರ್ಷ೦ - ಮಾಸ ೩ -ದಿನ ೧೮)

ದ್ವಿಜಭೂಪತಿಶಸ್ತ್ರಾದ್ಯೈರ್ಧನಪ್ರಾಪ್ತಿಂ ಮನೋರುಜಮ್ ।

ವಿದೇಶವನಸಂಚಾರಂ ಭಾನೋರಂತರ್ಗತೇ ರವೌ ।। 


ರವಿದಶಾ ರವಿಭುಕ್ತಿಯಲ್ಲಿ ಬ್ರಾಹ್ಮಣವರ್ಗದವರಿಂದ, ಬ್ರಾಹ್ಮಣ ಕರ್ಮಾಚರಣೆಯಿಂದ, ರಾಜನಿಂದ, ರಾಜಸೇವೆಯಿಂದ, ಶಸ್ತ್ರವ್ಯವಹಾರದಿಂದ ಧನಲಾಭವು, ಮನೋರೋಗವು, ವಿದೇಶ ಗಮನ ಕಾಡುಬೆಟ್ಟಗಳಲ್ಲಿ ಅಲೆದಾಡುವಿಕೆ ಇತ್ಯಾದಿ ಫಲವು. ಈ ಭುಕ್ತಿಫಲದಲ್ಲಿ ಎಲ್ಲ ಆಚಾರ್ಯರ ಅಭಿಪ್ರಾಯವನ್ನು ಚುಟುಕಾಗಿ ವಿವರಿಸುವ ವೈದ್ಯನಾಥರ ಮೂಲಶ್ಲೋಕವಿದೆ. ಸ್ವಭುಕ್ತಿ ಉತ್ತಮ ಫಲದಾಯಕವಲ್ಲ. ಅತ್ಯಂತ ಶುಭದಾಯಕನಾಗಿದ್ದರೆ, ಶುಭಾಶುಭ ಮಿಶ್ರಫಲವು. ಯಶೋವಂತ ತಂದೆಗೆ ಅನಿಷ್ಟಕಾರಿ, ಕಾಡುಬೆಟ್ಟಗಳಲ್ಲಿ ಅಲೆದಾಡುತ್ತಿರುತ್ತಾನೆಂದು ಮಂತ್ರೇಶ್ವರರೆಂದರು. ಪರಾಶರರು ರವಿಯು ಉಚ್ಚಾದಿ ಬಲಯುತನಾಗಿದ್ದರೆ- ಧನಧಾನ್ಯಾದಿ ಲಾಭ, ಬಲಹೀನನಾಗಿದ್ದರೆ- ಧನಧಾನ್ಯಾದಿ ನಾಶವೆಂದರು. ರವಿದಶಾ ರವಿಭುಕ್ತಿ ದೋಷ ಪರಿಹಾರಕ್ಕೆ - ರುದ್ರಾಭಿಷೇಕ, ಸೂರ್ಯನಮಸ್ಕಾರ, ಮೃತ್ಯುಂಜಯ ಜಪ, ಪೂಜಾ ಹೋಮ, ಆದಿತ್ಯ ಹೃದಯ ಪಠನವು. ಈ ಭುಕ್ತಿಫಲ ಚಿಂತಿಸುವಾಗ- ಚುಟುಕಿನಲ್ಲಿ ಫಲ ಹೇಳಿದರು. ಭುಕ್ತಿನಾಥನಿರುವ ರಾಶಿಶೀಲ, ಆತನಿರುವ ಭಾವಕಾರಕ ಮುಂತಾದ ಸರ್ವವನ್ನೂ ಚಿಂತಿಸಿ ಫಲ ಹೇಳಬೇಕು. 


ರವಿದಶಾ ಚಂದ್ರಭುಕ್ತಿ (೧-೬-೦) 


ಬಂಧುಮಿತ್ರಜನೈರರ್ಥಂ ಪ್ರಮಾದಂ ಮಿತ್ರಸಜ್ಜನೈ:। 

ಪಾಂಡುರೋಗಾದಿಸಂತಾಪಂ ಚಂದ್ರೇ ಭಾನುದಶಾನ್ತರೇ।। 

ರವಿದಶಾ ಚಂದ್ರಭುಕ್ತಿಯಲ್ಲಿ - ಬಂಧುಮಿತ್ರರಿಂದ ಅರ್ಥಲಾಭವು. ಆದರೆ ಮಿತ್ರರಾದ ಸಜ್ಜನರಿಂದ ಪ್ರಮಾದ ಸಂಭವಿಸುವುದು. ಪಾಂಡುರೋಗಾದಿ ಸಂತಾಪಕರ ಘಟನೆಗಳಿವೆ. (ರಿಪುನಾಶ, ವ್ಯಸನ ಪರಿಹಾರ, ಧನಲಾಭ, ಕೃಷಿಪ್ರವೃತ್ತಿ , ಗೃಹಸಲಕರಣೆ ಒಟ್ಟುಗೂಡಿಸುವುದು, ಕ್ಷಯರೋಗ ಸಂಭವ, ನೂತನ ಗೃಹ ನಿರ್ಮಾಣ, ಜಲಭಯ, ವಾತಕೋಪ, ಚಂದ್ರನ ಬಲಾಬಲ ನೋಡಿ ಈ ಫಲ ವ್ಯತ್ಯಾಸವರಿಯಬೇಕು. ಬೃಹತ್ಪಾರಾಶರ. - ಚಂದ್ರನು ಬಲಿಷ್ಠನಾದರೆ- ವಿವಾಹಾದಿ ಶುಭ ಪ್ರವೃತ್ತಿ , ಧನ, ಧಾನ್ಯ, ಪಶು, ವಾಹನ, ಕೃಷಿಕ್ಷೇತ್ರ (ಗದ್ದೆ) ಸುಖ ಪುತ್ರಾದಿ ಲಾಭ, ಪತ್ನೀಸುಖ, ರಾಜ್ಞೀಪ್ರಸಾದ, ಚಂದ್ರನು- ಕ್ಷೀಣ, ಬಲಹೀನನಾದರೆ- ಪತ್ನೀಪುತ್ರ ಪೀಡೆ, ಭೃತ್ಯನಾಶ, ಕಾರ್ಯಹಾನಿ, ರಾಜಕಲಹ, ವಿವಾದ, ಚಂದ್ರನು ೬-೮-೧೨ರಲ್ಲಿದ್ದರೆ- ಜಲಭೀತಿ, ಮನೋರೋಗ, ಬಂಧನ, ರೋಗ, ಸ್ಥಾನಚಲನೆ, ರವಿಯ೬-೮-೧೨ರಲ್ಲಿ ಭುಕ್ತಿನಾಥ ಚಂದ್ರನಿದ್ದರೆ- ಅಕಾಲ ಭೋಜನ, ದೇಶಸಂಚಾರ, ಕಷ್ಟಫಲವು. ಚಂದ್ರಜಪ ಪೂಜಾ ಹೋಮ, ದೇವೀಪ್ರಾರ್ಥನೆ, ದೇವಿಗೆ ಬಿಳಿ ಪುಷ್ಪಾರ್ಚನೆ ಹಾಲು ಪಾಯಸಾರ್ಪಣೆ ಇತ್ಯಾದಿ ಪರಿಹಾರವು.


ರವಿದಶಾ ಕುಜಭುಕ್ತಿ (0-೪-೬) 


ರತ್ನಕಾಂಚನವಿತ್ತಾಪ್ತಿಂ ರಾಜಸ್ನೇಹಂ ಶುಭಾವಹಮ್ ।

ಪೈತ್ಯರೋಗಾದಿಸಂಚಾರಂ ಕುಜೇ ಭಾನುದಶಾಂತರೇ।।

ರವಿದಶಾ ಕುಜಭುಕ್ತಿಯಲ್ಲಿ - ರತ್ನಗಳು, ಬಂಗಾರ, ಧನ ಇತ್ಯಾದಿ ಪ್ರಾಪ್ತಿ, ರಾಜಸಮಾನರ ಸ್ನೇಹ, ಸರ್ವಶುಭವು, ಪಿತ್ತರೋಗಾದಿ ಸಂಭವ, ಸಂಚಾರ ಇತ್ಯಾದಿ ಫಲ. ಮಂತ್ರೇಶ್ವರರು ಇಬ್ಬರೂ ಪಾಪರಾದುದರಿಂದ ಸ್ವಜನ ವೈರ, ಸ್ಥಾನಭ್ರಂಶ, ರೋಗ, ವ್ರಣಭಯವೆಂದರು. ವೈದ್ಯನಾಥರಂತೆ ಕಲ್ಯಾಣವರ್ಮರು- ಸಂಗ್ರಾಮಜಯಃ ಪ್ರಚಂಡತಾ ಸೌಖ್ಯಂ ಚ ಭವತಿ ಎಂದಿದ್ದಾರೆ. ಪರಾಶರರು - ಕುಜನು ಉಚ್ಚಾದಿ ಬಲಯುತನಾಗಿ - ಲಗ್ನಾತ್ ಕೇಂದ್ರ ತ್ರಿಕೋಣಗಳಲ್ಲಿದ್ದರೆ- ಶುಭಕಾರ್ಯ ಭೂಮಿಲಾಭ, ಕೃಷಿಲಾಭ, ಧನಧಾನ್ಯ, ವೃದ್ಧಿ, ರಕ್ತವಸ್ತುವಾದಿಲಾಭ, ಗೃಹಲಾಭ, ಸೌಖ್ಯ, ರಾಜಪ್ರೀತಿ, ಸಹೋದರರ ಸುಖವು. ಬಲಹೀನ ಕುಜನು ರವಿಯಿಂದ ೮-೧೨ರಲ್ಲಿ ಪಾಪಯುತಿ ದೃಷ್ಟಿಯಲ್ಲಿದ್ದರೆ- ಕ್ರೂರಬುದ್ಧಿ, ಮನೋರೋಗ, ಕಾರಾಗೃಹವಾಸ ಸಂಭವ, ಕರ್ಮನಾಶ, ಸಹೋದರ ಹಾನಿಯು. ಕುಜನು ೨-೭ರ ಅಧಿಪನಾಗಿ ನೀಚನೂ ಆಗಿದ್ದರೆ- ಸರ್ವಸಂಪತ್ತು ರಾಜನಿಂದ ಅಪಹರಿಸಲ್ಪಡಲಿದೆ ಎಂದರು. ಭುಕ್ತಿಫಲ ದೋಷವಿದ್ದರೆ ಪರಿಹಾರಕ್ಕೆ- ಚಂಡಿಕಾ ಪಾರಾಯಣ, ಧನ್ವಂತರೀ ಜಪ,ಪೂಜಾ ಹೋಮ, ದುರ್ಗಾಪೂಜಾ,ಹೋಮ, ರಕ್ತಪುಷ್ಪಾರ್ಚನೆ, ದೇವಿಗೆ ಕುಂಕುಮಾರ್ಚನೆ, ವೇದಪಠನ ಇತ್ಯಾದಿ.


ರವಿದಶಾ- ರಾಹುಭುಕ್ತಿ (೦-೧೦-೨೪) 


ಅಕಾಲೇ ಮೃತ್ಯುಸಂತಾಪಂ ಬಂಧುವರ್ಗಾರಿಪೀಡನಮ್ ।

ಪದಚ್ಯುತಿಂ ಮನೋದುಃಖಂ ರವೇರಂತರ್ಗತೇऽಪ್ಯಹೌ।।  

ರವಿದಶಾ ರಾಹುಭುಕ್ತಿಯಲ್ಲಿ - ಅಕಾಲಮೃತ್ಯು ಸಂಭವ, ದುಃಖ, ಬಂಧುವಿರೋಧ, ಶತ್ರುಪೀಡೆ, ಸ್ಥಾನಚ್ಯುತಿ, ಮನೋದುಃಖವು. ಶತ್ರುಗಳ ಉದಯ, ಧನನಷ್ಟ ವಿಷಭಯ, ಮೂರ್ಛಾದೋಷ , ಶಿರೋನೇತ್ರಾದಿ ರೋಗವು, ಬೃಹತ್ಪಾರಶರ - ಈ ರಾಹು ಕೇಂದ್ರ ತ್ರಿಕೋಣಗತ ನಾಗಿದ್ದರೆ- ಆದಿಯ ೨ ಮಾಸದಲ್ಲಿ ಧನನಷ್ಟ , ಭಯ, ನಂತರ– ಚೋರ, ಶತ್ರು, ವ್ರಣಾದಿ ಪೀಡೆ, ಮಡದಿ ಮಕ್ಕಳಿಗೆ ಕಷ್ಟ , ಒಬ್ಬ ಶುಭನ ಯುತಿ ಯಾ ದೃಷ್ಟಿ ರಾಹುವಿಗಿದ್ದರೆ- ಸುಖಾರಂಭಾದಿಗಳು, ಯೋಗಕಾರಕನ ಯುತಿದೃಷ್ಟಿ ಸಹಿತನಾಗಿ ಲಗ್ನಾತ್ ೩-೬-೧೦-೧ರಲ್ಲಿ ರಾಹುವಿದ್ದರೆ- ದೇಹಸುಖ, ಧನಲಾಭ, ರಾಜಪ್ರೀತಿ, ರವಿಯಿಂದ ಇಷ್ಟಸ್ಥಾನದಲ್ಲಿ ರಾಹುವಿದ್ದರೆ ರಾಜಸನ್ಮಾನಭಾಗ್ಯ ವೃದ್ಧಿ, ಕೀರ್ತಿಲಾಭವು, ಪುತ್ರೋತ್ಸವ, ಮಡದಿ ಮಕ್ಕಳ ಕಿರಿಕಿರಿ ಈ ಭುಕ್ತಿಯಲ್ಲಿ ಆಗಾಗ ತೋರೀತು. ಮನೆಯಲ್ಲಿ ನಿತ್ಯಕಲ್ಯಾಣೋತ್ಸವವಿದೆ. ರವಿಯಿಂದ ೧೨-೮ರಲ್ಲಿ ರಾಹುವಿದ್ದರೆ ಬಂಧನ, ಕಾರಾಗೃಹವಾಸ, ಸ್ಟಾನನಾಶ, ಶತ್ರು, ರೋಗಾದಿ ಪೀಡೆ, ಅತಿಸಾರಾದಿ ದೋಷ, ಪಶುಪೀಡೆ, ಕ್ಷಯ, ೨-೭ರಲ್ಲಿಯೋ ಅದರ ಅಧಿಪರ ಯುತಿಯಲ್ಲೋ ಇದ್ದರೆ- ಸರ್ಪ ಕಡಿತ, ವಿಷಜಂತು ಕಡಿತ, ಮೃತ್ಯುಪ್ರಸಂಗವೂ ಬಂದೀತು. ರಾಹುಜಪ, ಸರ್ಪಪೂಜೆ, ಆಶ್ಲೇಷಾಬಲಿ, ಪಂಚಾಮೃತಾಭಿಷೇಕ, ರಾಹುಶಾಂತಿ, ಉದಕಶಾಂತಿ ಜಪ, ಮನ್ಯುಸೂಕ್ತ ಜಪ,ಹೋಮ.


 ರವಿದಶಾ ಗುರುಭುಕ್ತಿ  (೦-೯-೧೮) 


ಸರ್ವಪೂಜ್ಯಂ ಸುತಾದ್ವಿತಂ ದೇವಬ್ರಾಹ್ಮಣಪೂಜನಮ್ । ಸತ್ಕರ್ಮಾಚಾರಸದ್ಗೋಷ್ಠಿ ರವೇರಂತರ್ಗತೇ ಗುರೌ ।।‌ 

ರವಿದಶಾ ಗುರುಭುಕ್ತಿಯಲ್ಲಿ - ಸರ್ವರಿಂದಲೂ ಪೂಜ್ಯತೆ, ಪುತ್ರರಿಂದ ಧನಲಾಭ, ದೇವಬ್ರಾಹ್ಮಣ ಪೂಜೆ, ಸತ್ಯರ್ಮಾಚರಣೆ, ಸತ್ಸಂಗದ ಸಭೆಯಲ್ಲಿ ಭಾಗವಹಿಸುತ್ತಿರುವುದು ಇತ್ಯಾದಿ ಫಲ. (ಜಾತಕಪಾರಿಜಾತ ,ಫಲ ದೀಪಿಕಾ - ಶತ್ರುನಾಶ, ಧನಲಾಭ, ದೇವಪೂಜೆ, ಕರ್ಣರೋಗ, ರಾಜಯಕ್ಷ್ಮ ಹೀಗೆ ಗೋಪತಿ ದಶಾಯಾಂ ಗಿರಾಂ ಪತಿ ಭುಕ್‌ ಎಂದಿದ್ದಾರೆ. ಗೋಪತಿ- ವೇದಕ್ಕೊಡೆಯ ರವಿ, ಗಿರಾಂಪತಿ= ಮಾತಿಗೆ ಪತಿ ಗುರು, ಸಾರಾವಳಿಯಲ್ಲಿ - "ವ್ಯಾಧಿಭಿರರಿಭಿರ್ವ್ಯಸನೈ: ತಥಾऽಲಕ್ಷ್ಮ್ಯಾ ಚ ವಿಮುಚ್ಯತೇ" ರೋಗ ಶತ್ರು ವ್ಯಸನ ಅಲಕ್ಷ್ಮೀ ವಿರಹಿತನೆಂದರು, ಗುರುಉಚ್ಚ ಮಿತ್ರಾದಿ ವರ್ಗಸ್ಥನಾಗಿ ಕೇಂದ್ರ ತ್ರಿಕೋಣಾದಿ ಇಷ್ಟಸ್ಥಾನದಲ್ಲಿದ್ದರೆ ವಿವಾಹ, ರಾಜದರ್ಶನ, ಧನ, ಧಾನ್ಯ , ಪುತ್ರ , ಸುಖ, ರಾಜಪ್ರಸಾದ, ವಸ್ತ್ರ , ಅಲಂಕಾರ ಇತ್ಯಾದಿ ಲಾಭ, ಬ್ರಾಹ್ಮಣಪ್ರಿಯ ಸನ್ಮಾನ, ಸರ್ವಕಾರ್ಯಸಿದ್ಧಿಯು, ಗುರುವು ೯-೧೦ರ ಈಶನಾಗಿದ್ದರೆ – ರಾಜ್ಯಲಾಭ, ಸ್ಥಾನಾರೋಹಣ, ಮಹಾಸುಖವು. ರವಿಯಿಂದ ಇಷ್ಟ ಸ್ಥಾನಸ್ಥಿತನಾಗಿದ್ದರೆ- ದಾನಧರ್ಮ ಪ್ರವೃತ್ತಿ , ಸುಖಭಾಗ್ಯ ವೃದ್ಧಿ , ಮನಸ್ಸಂತೋಷ, ಗುರುದೇವತಾ ಭಕ್ತಿಯು, ರವಿಯಿಂದ ೬-೮ರಲ್ಲಿ ಬಲಹೀನ ನಾಗಿದ್ದರೆ ದೇಹಪೀಡೆ, ಮಡದಿಮಕ್ಕಳ ಕಷ್ಟ ರಾಜಕೋಪ, ಪಾಪಕರ್ಮ, ಮನೊದುಃಖ, ಧನಹಾನಿಯು, ಪರಿಹಾರಕ್ಕೆ– ಗುರುಜಪ, ವಿಷ್ಣುರುದ್ರಾದಿ ಪ್ರಾರ್ಥನೆ, ಚಂಡಿಕಾಪಾರಾಯಣ, ವಿಷ್ಣುಸಹಸ್ರನಾಮಾರ್ಚನೆ, ಚಣಕಪಾಯಸ ಸಮರ್ಪಣೆ ಇತ್ಯಾದಿ, ರುದ್ರಾಭಿಷೇಕ ಸಹ.


ರವಿದಶಾ ಶನಿಭುಕ್ತಿ (0-೧೧-೧೨)

ಸರ್ವಶತ್ರುತ್ವಮಾಲಸ್ಯಂ ಹೀನವೃತ್ತಿಂ ಮನೋರುಜಮ್ । 

ರಾಜಚೋರಭಯಪ್ರಾಪ್ತಿಂ ರವೇರಂತರ್ಗತೇ ಶನೌ ।। 

ರವಿದಶಾ ಶನಿಭುಕ್ತಿಯಲ್ಲಿ - ಸರ್ವರಲ್ಲಿ ಶತ್ರುತ್ವ , ಆಲಸ್ಯ , ಹೀನಪ್ರವೃತ್ತಿ , ಮನೋರೋಗ, ರಾಜಭಯ, ಚೋರಪೀಡೆಯು. ಜಾ.ಪಾ. (ಫ.ದೀ.- ಧನಹಾನಿ, ಪುತ್ರಚಿಂತೆ, ಪತ್ನೀರೋಗ, ಕುಟುಂಬ ವಿಭಾಗ, ಮಲಿನ ಕಫ ರೋಗವು. ಸಾರಾವಲಿಯಲ್ಲಿ- ಶತ್ರುಹೋರಾಟ, ಸರ್ವಶಕ್ತಿಹ್ರಾಸವೆಂದರು. ಬೃ.ಪಾ – ಉಚ್ಚ ಸ್ವಕ್ಷೇತ್ರ - ಕೇಂದ್ರ ತ್ರಿಕೋಣಾದಿಯುತ ಶನಿಯಾದರೆ- ಗೃಹದಲ್ಲಿ ಮಂಗಲೋತ್ಸವ, ಸತ್ಕರ್ಮಾನುಷ್ಠಾನ, ರಾಜಸನ್ಮಾನ, ಕೀರ್ತಿಭೂಷಣ, ಧನಾದಿ ಲಾಭ, ಧನಧಾನ್ಯ ಸಮೃದ್ಧಿ , ಗೃಹಸುಖಾದಿ ಫಲವು, ರವಿಯಿಂದ೮-೧೨ರಲ್ಲಿ ಅನಿಷ್ಟ ಬಲಹೀನ ಶನಿ ಇದ್ದರೆ- ವಾತಾದಿ ಪೀಡೆ, ಕಾರ್ಯ ಹಾನಿ, ಬಂಧನ, ಧನನಾಶ, ಅಕಸ್ಮಾತ್ ಕಲಹ, ಭೃತ್ಯಕಲಹ, ಭಾರ್ಯಾ ಕಲಹ, ದಾಯಾದ ಕಲಹ, ಮಿತ್ರಹಾನಿ, ಶನಿಯು ಬಲಹೀನನಾಗಿ ೨-೭ರ ಸಂಬಂಧ ಪಡೆದರೆ- ಮಾತಾಪಿತೃ ವಿಯೋಗ, ಅಪಮೃತ್ಯು , ಭಯಸಂಚಾರಾದಿ ಫಲ. ಪರಿಹಾರಕ್ಕೆ- ಕೃಷ್ಣಾಗೋದಾನ, ಮಹಿಷಿದಾನ, ಶನಿಜಪ, ತ್ರಿಮೂರ್ತಿ ಪ್ರಾರ್ಥನೆ, ಅಶ್ವತ್ಥಸೇವೆ, ಮೃತ್ಯುಂಜಯ ಜಪ, ಶನಿಜಪ,ಶನಿಶಾಂತಿ.)


ರವಿದಶಾ ಬುಧಭುಕ್ತಿ (೦-೧೧-೬) 

ಬಂಧುಪೀಡಾಂ ಮನೋದುಃಖಂ ಸನ್ನೋತ್ಸಾಹಂ ಧನಕ್ಷಯಮ್ । 

ಕಿಂಚಿತ್ಸುಖಮವಾಪ್ನೋತಿ ರವೇರಂತರ್ಗತೇ ಬುಧೇ।। 

ರವಿದಶಾ ಬುಧಭುಕ್ತಿಯಲ್ಲಿ - ಬಂಧುಪೀಡೆ, ಮನೋದುಖ, ಉತ್ಸಾಹಹೀನತೆ, ಧನಹಾನಿ, ಸ್ವಲ್ಪ ಸುಖವೂ ಲಭಿಸಿತು. ಜಾ.ಪಾ. (ಕಾಮಾಲೆರೋಗ, ಬೊಕ್ಕೆ ಕಜ್ಜಿ ತುರಿಕೆ, ಜಠರರೋಗ, ವ್ಯರ್ಥ ಮಾತು, ಭೂಮಿನಾಶ, ಭಾರ್ಯಾಪೀಡೆ, ಭಯ, ಕಟಿರೋಗಫಲ. ಫ.ದೀ. ಬೃ.ಪಾ - ಬುಧನು ಉಚ್ಚ ಸ್ವಕ್ಷೇತ್ರಾದಿ ಬಲಯುತನಾಗಿ ಕೇಂದ್ರ ತ್ರಿಕೋಣ ಲಾಭಾದಿ ಇಷ್ಟಭಾವದಲ್ಲಿದ್ದರೆ ರಾಜ್ಯಲಾಭ ಮಹಾ ಉತ್ಸಾಹ, ಮಡದಿ ಮಕ್ಕಳ ಸುಖ, ವಾಹನಲಾಭ, ರಾಜಪ್ರಸಾದ, ಪುಣ್ಯತೀರ್ಥಕ್ಷೇತ್ರಾದಿ ಗಮನ, ಭೂಷಣ ಪ್ರಾಪ್ತಿ , ಗೋಧನ ವೃದ್ಧಿ , ಬುಧನು - ೯-೧೦ನೇ ಭಾವೇಶನೊಡನಿದ್ದರೆ ಲಾಭವೃದ್ಧಿ , ೯-೧೦-೫ರಲ್ಲಿದ್ದರೆ- ಸರ್ವಸನ್ಮಾನ ಸರ್ವಸಮೃದ್ಧಿ , ಶುಭಮಂಗಲ ಧರ್ಮಾಚರಣೆ, ಯಜ್ಞಕರ್ಮ, ತನ್ನ ಹೆಸರಿನ ಪದ್ಯವನ್ನು ಅನ್ಯರು ಪಠಿಸುವುದು,ಇತ್ಯಾದಿ. ರವಿಯಿಂದ ೬-೮-೧೨ರಲ್ಲಿ ಬುಧನು- ನೀಚಾದಿ ಬಲಹೀನತೆಯಲ್ಲಿದ್ದರೆ- ಆತನ ಭುಕ್ತಿಯಲ್ಲಿ – ದಾರಪುತ್ರಾದಿ ಪೀಡೆ, ಸಂಚಾರಭಯ, ದೇಹಪೀಡೆ, ಮನಸ್ತಾಪ, ದುಃಖಪ್ರಸಂಗ, ಬಂಧುಹಾನಿ, ಜ್ವರ ಭಯಾದಿ ಫಲ. ಪರಿಹಾರಕ್ಕೆ - ವಿಷ್ಣುಸಹಸ್ರನಾಮ ಪಾರಾಯಣ, ಅನ್ನದಾನ, ವಿಷ್ಣುಪೂಜೆ, ಸತ್ಯನಾರಾಯಣ ವ್ರತ, ಏಕಾದಶೀ ವ್ರತ, ಸುವರ್ಣದಾನ, ಕ್ಷೀರಾನ್ನ ಸಮರ್ಪಣೆ, ರಜತದಾನ.


ರವಿದಶಾ ಕೇತುಭುಕ್ತಿ (೦-೪-೬)


ಕಂಠರೋಗಂ ಮನಸ್ತಾಪಂ ನೇತ್ರರೋಗಮಥಾಪಿ ವಾ । 

ಅಕಾಲಮೃತ್ಯುಮಾಪ್ನೋತಿ ರವೇರಂತರ್ಗತೇ ಧ್ವಜೇ ।।  


ರವಿದಶಾ ಕೇತುಭುಕ್ತಿಯಲ್ಲಿ- ಕುತ್ತಿಗೆಯಲ್ಲಿ ರೋಗ, ಮನಸ್ತಾಪ, ಕಣ್ಣಿನ ರೋಗ, ಅಕಾಲ ಮೃತ್ಯುಸಂಭವ, ಇತ್ಯಾದಿ ಫಲವು ಜಾ.ಪಾ. ( ಫ.ದೀ. - ರಾಜಕೋಪ, ಮನೋವ್ಯಥೆ, ಸ್ವಜನೋಪದ್ರವ, ಧನನಷ್ಟ , ಪಾದರೋಗ ಶಿರೋರೋಗಾದಿ ಫಲ. ಬೃ.ಪಾ. - ಕೇತು ಲಗ್ನೇಶನೊಡನೆ ಇದ್ದರೆ ಆದಿಯಲ್ಲಿ ಸುಖ, ಮಧ್ಯೇ ಧನನಷ್ಟ , ಅಂತ್ಯದಲ್ಲಿ ಮೃತ್ಯುವಾರ್ತೆ, ರವಿಯಿಂದ ೮-೧೨ರಲ್ಲಿ ಕೇತುವಿದ್ದರೆ ಕೆನ್ನೆ , ಹಲ್ಲು , ಮೂತ್ರರೋಗ, ಸ್ಥಾನಭ್ರಂಶ. ಪಾಪಯೋಗವಿದ್ದರೆ- ಪಿತೃಜನ ಮೃತ್ಯು , ವಿದೇಶಗಮನ, ಶತ್ರುಪೀಡೆ, ಭಯಾದಿಫಲ- ಯೋಗಕಾರಕಯುತನಾಗಿ ಕೇತು. ೩-೬-೧೦ರಲ್ಲಿ ಶುಭಾಂಶಯುತನಾಗಿದ್ದರೆ- ಸೌಖ್ಯ ಸಂತೋಷ, ಲಾಭ, ಯಶೋವೃದ್ಧಿ , ವಿಚಿತ್ರ ವಸ್ತ್ರಾದಿ ಲಾಭ, ಬಂಧುಸೌಖ್ಯ , ವಿಘ್ನನಾಶ, ಸಂಪತ್ಸಮೃದ್ಧಿ ಫಲ. ೨-೭ರ ಅಧಿಪರೊಡನಿದ್ದರೆ ಅಪಮೃತ್ಯು , ಭಯ ಬಂದೀತು, ದೋಷ ಪರಿಹಾರಕ್ಕೆ- ಕೇತುಜಪ, ಪೂಜಾ ಹೋಮ, ಸಪ್ತಶತೀಪಾರಾಯಣ,ಗಣಪತಿಪೂಜೆ, ಹೋಮ, ಗೋದಾನ, ಮೋದಕಾರ್ಪಣೆ ಇತ್ಯಾದಿ. 



ರವಿದಶಾ ಶುಕ್ರಭುಕ್ತಿ (೧-೦-೦) 

ಜಲೇ ದ್ರವ್ಯಾಪ್ತಿಮಾಯಾಸಂ ಕುಸ್ತ್ರೀಜನನಿಷೇವಣಮ್ । ಶುಷ್ಕಸಂವಾದಮಾಪ್ನೋತಿ ರವೇರಂತರ್ಗತೇ ಭೃಗೌ ।।


ರವಿದಶಾಶುಕ್ರಭುಕ್ತಿಯಲ್ಲಿ - ಜಲಮೂಲಕವಾದ ಪ್ರವೃತ್ತಿಯಿಂದ ಧನಪ್ರಾಪ್ತಿ , ಆಯಾಸ, ಕೆಟ್ಟ ಸ್ತ್ರೀಜನ ಸಂಪರ್ಕ, ಪೊಳ್ಳು ಮಾತು, ಇತ್ಯಾದಿ ಫಲ. ಜಾ.ಪಾ. (ಫ ದೀ – ಶಿರೋರೋಗ, ಉದರವೇದನೆ ಕೃಷಿನಾಶ, ಗೃಹಧನಾದಿ ನಷ್ಟ . ಮಡದಿಮಕ್ಕಳಿಗೆ ದುಖ, ರವಿ ಶುಕ್ರರು ವಿರುದ್ಧ ಗ್ರಹರಾದುದರಿಂದ ಮಂತ್ರೇಶ್ವರರು ಹೀಗೆ ಗೃಹ ಧನಾದಿ ನಷ್ಟ ಹೇಳಿದರು.) - ಶುಕ್ರನು ಕೆಂದ್ರ ತ್ರಿಕೋಣ ಲಾಭಗಳಲ್ಲಿ ಉಚ್ಚಾದಿ ಬಲಯುತನಾಗಿದ್ದರೆ- ಸುಖ, ಭೋಗ, ಗ್ರಾಮಾಂತರ ಪ್ರಯಾಣ, ಪ್ರಭುಬ್ರಾಹ್ಮಣಾದಿ ಸಂದರ್ಶನ, ಸುಖ , ರಾಜ್ಯಲಾಭ, ಮಹೋತ್ಸಾಹ, ಕಲ್ಯಾಣ, ಮೃಷ್ಟಾನ್ನ ಭೋಜನ, ರತ್ನಲಾಭ, ಧನಧಾನ್ಯ ವೃದ್ಧಿ , ವಾಹನಲಾಭ, ಕೀರ್ತಿಸಂಪದಭಿವೃದ್ಧಿ ಇತ್ಯಾದಿ ಶುಭವು, ರವಿಯಿಂದ ೬-೮-೧೨ರಲ್ಲಿ ಶುಕ್ರನು ಬಲಹೀನನಾಗಿದ್ದರೆ ರಾಜಕೋಪ, ಪುತ್ರ ಸ್ತ್ರೀ ಧನಾದಿ ನಾಶ, ಭುಕ್ತಿ ಮಧ್ಯದಲ್ಲಿ ಲಾಭ, ಶುಭ ಸ್ವಲ್ಪ ತೋರೀತು. ಅಂತ್ಯದಲ್ಲಿ ಸ್ಥಾನಭ್ರಂಶ, ಯಶೋನಾಶಫಲವು. ಶುಕ್ರನು ೭ ನೇ ಭಾವೇಶ ಮಾತ್ರನಾಗಿದ್ದರೆ - ರೋಗಾದಿ ಭಯವು. ರವಿಯಿಂದ೮-೧೨ರಲ್ಲೂ ಇದ್ದರೆ- ಮೃತ್ಯುಭಯವು, ಸಾರಾವಳಿಯಲ್ಲಿ ದೇಶತ್ಯಾಗ ಸಂಭವವೆಂದರು. ಪರಿಹಾರಕ್ಕೆ– ಶುಕ್ರಜಪ, ಲಕ್ಷ್ಮೀಹೃದಯ ಪಾರಾಯಣ, ಚಂಡಿಕಾ ಪಾರಾಯಣ, ಶ್ರೀಸೂಕ್ತಪಠನ, ದುರ್ಗಾನಮಸ್ಕಾರ, ಸುವರ್ಣದಾನ, ಶ್ರೀಸೂಕ್ತ ಹೋಮ, ಭಾಗ್ಯ ಸೂಕ್ತ ಪಠನ ಇತ್ಯಾದಿಯು.

ರವ್ಯಾದಿಗ್ರಹರಿಂದ ಜೀವನವೃತ್ತಿ.

 ರವ್ಯಾದಿ ಗ್ರಹರ ಜೀವನ ವೃತ್ತಿಕಾರಕತ್ವ -  


ಅರ್ಕಾಂಶೇ ತೃಣಕನಕೋರ್ಣಭೇಷಜಾದ್ಯೈ: ಚಂದ್ರಾಂಶೇ ಕೃಷಿಜಲಜಾಂಗನಾಶ್ರಯಾಚ್ಚ ।

ಧಾತ್ವಗ್ನಿಪ್ರಹರಣಸಾಹಸೈ:ಕುಜಾಂಶೇ          ಸೌಮ್ಯಾಂಶೇ ಲಿಪಿಗಣಿತಾದಿ ಕಾವ್ಯಶಿಲ್ಪೈ:।।

ಜೀವಾಂಶೇ ದ್ವಿಜವಿಬುಧಾಕರಾದಿಧರ್ಮೈ :    ಕಾವ್ಯಾಂಶೇ ಮಣಿರಜತಾದಿ ಗೋಮಹಿಷ್ಯೈ: । 

ಸೌರಾಂಶೇ ಶ್ರಮವಧಭಾರನೀಚಶಿಲ್ಪೈ: ಕರ್ಮೇಶಾದ್ಯುಷಿತ ಸಮಾನ ಕರ್ಮಸಿದ್ಧಿ:।।


 ರವಿಯಿಂದ ಜೀವನವೃತ್ತಿ -


 ಲಗ್ನ ಚಂದ್ರ ರವಿಗಳಲ್ಲಿ ಬಲಿಷ್ಠರು ಯಾರೋ ಅವರ ಕರ್ಮೇಶನ ನವಾಂಶದ ಅಧಿಪನು ರವಿಯಾಗಿದ್ದರೆ ಹುಲ್ಲು, ಬಂಗಾರ, ಉಣ್ಣೆ, ಔಷಧಿ ಇವುಗಳಿಂದ ಜೀವನ ವೃತ್ತಿ ಎಂದು ವರಾಹಮತವು . ಆದ್ಯೈ: ಎಂದಿರುವುದರಿಂದ ಹುಲ್ಲಿಗೆ ಸಂಬಂಧಪಟ್ಟ ಚಾಪೆ, ಹುಲ್ಲಿನ ರಸಗಳು, ಹುಲ್ಲುಗಾವಲು, ಒಣ ಹುಲ್ಲು, ಬಂಗಾರ, ಅದರ ಒಡವೆ, ಬಂಗಾರದ ಭಸ್ಮ, ಬಂಗಾರದ ಲೇಪ, ಬಂಗಾರದೊಡವೆ ತಯಾರಿ, ವ್ಯಾಪಾರ, ಉಣ್ಣೆ, ಕಂಬಳಿ, ಕುರಿ, ಕಂಬಳಿ ವ್ಯಾಪಾರ, ಕಂಬಳಿ ತಯಾರಿ, ಔಷಧ ತಯಾರಿ, ಔಷಧ ವ್ಯಾಪಾರ, ಔಷಧ ಕೊಡುವ ವೈದ್ಯವೃತ್ತಿ , ಆರೋಗ್ಯಶಾಲೆ, ಚಿಕಿತ್ಸೆ, ಗಿಡಮೂಲಿಕೆ ವಹಿವಾಟು- ಹೀಗೆ ಇವನ್ನೆಲ್ಲ ವಿವರವಾಗಿ ಅರಿಯಲು ಆದ್ಯೈ: ಎಂದಿರುವರು ವರಾಹಮಿಹಿರರು . ಇತರ ಆಚಾರ್ಯರು ಹೇಳಿದಂತೆ-ಮಂತ್ರೇಶ್ವರರು- ಫಲವೃಕ್ಷಗಳು, ಮಂತ್ರಜಪಾದಿಗಳು, ಠಕ್ಕು ಮೋಸದ ಕೆಲಸಗಳು, ಜೂಜುಕಟ್ಟೆ, ಸುಳ್ಳು, ಕಂಬಳಿ, ಔಷಧಗಳು, ಧಾತುಕ್ರಯಗಳು, ರಾಜಸೇವೆ ಇತ್ಯಾದಿಯನ್ನು ರವಿಯ ವೃತ್ತಿಗೆ ಹೇಳಿದ್ದಾರೆ . ಈ ಗ್ರಹರು ಇರುವ ರಾಶಿಭಾವಗಳನ್ನೂ ನೋಡಿಕೊಂಡು ವೃತ್ತಿಗೆ ಸೇರಿಸಬೇಕು. ಹಲವಾರು ವೃತ್ತಿಯನ್ನು ಒಬ್ಬ ಮಾಡುವುದಿದೆ.  


ಚಂದ್ರನಿಂದ ಜೀವನ ವೃತ್ತಿ - 


ಜೀವನ ವೃತ್ತಿಗೆ ಹಿಂದೆ ಹೇಳಿದಂತೆ ಕಾರಕನು ಚಂದ್ರನಾದರೆ ಕೃಷಿ , ಜಲದಿಂದ ಉತ್ಪತ್ತಿಯಾಗುವ ಸಕಲ ವಸ್ತು , ಸ್ತ್ರೀಯ ಆಶ್ರಯ ಇತ್ಯಾದಿ ಪ್ರವೃತ್ತಿಯೋ ಇವುಗಳಿಗೆ ಸಂಬಂಧಪಟ್ಟ ಸಕಲ ವಸ್ತು ವ್ಯಾಪಾರ ವನ್ನೋ ಮಾಡಿ ಜೀವನ ನಡೆಸುತ್ತಾನೆ . ಇದು ವರಾಹಮಿಹಿರರ ಮತ . ಮಂತ್ರೇಶ್ವರರು ತಮ್ಮ ಫಲದೀಪಿಕಾ ಗ್ರಂಥದಲ್ಲಿ - ಜೀವನ ವೃತ್ತಿಕಾರಕ ಚಂದ್ರನಾದರೆ- ಜಲದಲ್ಲಿ ಉತ್ಪತ್ತಿಯಾಗುವ ಮುತ್ತು, ಮೀನು, ನೌಕೆ ಮುಂತಾದ ವ್ಯಾಪಾರ, ಕೃಷಿ, ಕೃಷಿ ಸಲಕರಣೆ, ಧವಸಧಾನ್ಯ, ಗೋವು, ಎಮ್ಮೆ ಕೋಣ, ದನದ ಹಾಲು ಬೆಣ್ಣೆ, ಮೊಸರು, ತುಪ್ಪ ( ನೊಗ, ನೇಗಿಲು, ಹಗ್ಗ, ಧಾನ್ಯ, ಬೇಳೆ, ಬಲೆ, ದೋಣಿ, ವಿವಿಧ ಮೀನುಗಾರಿಕೆ, ಹಡಗು ಯಾನ, ಕಮಲ, ಏತದ ಯಂತ್ರ ಇತ್ಯಾದಿ ವಿನಾ ) ತೀರ್ಥಾಟನೆ, ಸ್ತ್ರೀಸಹಾಯ, ಸ್ತ್ರೀಧನ, ಜವುಳಿ ವ್ಯಾಪಾರ, ರೇಶ್ಮೆ ಬಟ್ಟೆಬರೆ ತಯಾರಿ, ಮಗ್ಗ, ಬಳೆ, ಅಲಂಕಾರಸಾಧನಾದಿ ಸರ್ವ ವ್ಯಾಪಾರದಿಂದ ಎಂದರು . ವೈದ್ಯನಾಥರು ಮಣ್ಣು, ವಾದ್ಯ ವಿಶೇಷ, ರಾಣೀ ಜನಾಶ್ರಯ ಇವನ್ನು ಸೇರಿಸಿದ್ದಾರೆ .


ಕುಜನಿಂದ ಜೀವನವೃತ್ತಿ


 ಕುಜನು ಜೀವನ ವೃತ್ತಿಕಾರಕನಾದರೆ- ಬಂಗಾರ, ಬೆಳ್ಳಿ, ಕಬ್ಬಿಣ, ಇತರ ಲೋಹಗಳು ಇತ್ಯಾದಿ ಧಾತು ಪದಾರ್ಥಗಳು, ಬೆಂಕಿಯಿಂದ ಬೇಯಿಸಿದ ಕುದಿಸಿದ ಪರಿವರ್ತಿಸಿದ ವಸ್ತುಗಳು, ಗಂಧಕ, ಮನಶ್ಯಿಲೆ, ಹೋಮ, ಪಾಕ, ಆಭರಣಗಳು, ಅಸ್ತ್ರಶಸ್ತ್ರಗಳು, ಕುಟ್ಟಿ ಪುಡಿಗೈದ ವಸ್ತುಗಳು, ಯಂತ್ರಗಳು, ಯುದ್ಧಸಾಹಸ ಸ್ಪರ್ಧೆ ಹೀಗೆ ಇವುಗಳ ಸಂಬಂಧಿತ ಪ್ರವೃತ್ತಿ, ವ್ಯಾಪಾರಗಳಿಂದ ಜೀವನವೆಂದು ವರಾಹಮಿಹಿರರ ಮತವು. ಮಂತ್ರೇಶ್ವರರು ಇವೆಲ್ಲವನ್ನೂ ಹೇಳಿ ಭೂಮಿ, ಅದಕ್ಕೆ ಸಂಬಂಧಪಟ್ಟ ಸರ್ವ ವ್ಯವಹಾರ, ಖನಿಜವಸ್ತುಗಳು, ಅಡಿಗೆಶಾಲೆಯ ಸಕಲ ಪ್ರವೃತ್ತಿಗಳು, ಪರೋಪದ್ರವದ ಕೆಲಸಗಳು, ಆಯುಧ ಪ್ರವೃತ್ತಿ, ಮ್ಲೇಂಛ ಜನಾಶ್ರಯ ಸೂಚಕ, ಗುಪ್ತಚಾರ, ಚೋರವೃತ್ತಿ, ಇತ್ಯಾದಿ ಪ್ರವೃತ್ತಿ ವ್ಯಾಪಾರಾದಿಗಳಿಂದ ಜೀವನವೆಂದರು . ವೈದ್ಯನಾಥರು ಇವೆಲ್ಲವನ್ನು ಹೇಳಿ ಇದ್ದಲು, ನೂಲು,ಹೊಲಿಗೆ, ಇವುಗಳ ತಯಾರಿ, ಯುದ್ಧವಿದ್ಯೆ ಇವನ್ನು ಸೇರಿಸಿದ್ದಾರೆ. 


ಬುಧನಿಂದ ಜೀವನವೃತ್ತಿ 


ಅಂಶಪತಿ ಜೀವನಕಾರಕ ಬುಧನಾದರೆ- ಅಕ್ಷರ, ಬರವಣಿಗೆ, ಪುಸ್ತಕ ಬರೆಯುವುದು, ಕಲಿಸುವುದು, ಗ್ರಂಥರಚನೆ, ಮುದ್ರಣ ಇವುಗಳಿಗೆಲ್ಲ ಸಂಬಂಧಪಟ್ಟ ಸಕಲ ಪ್ರವೃತ್ತಿ, ವ್ಯಾಪಾರ, ರಚನೆ ಇತ್ಯಾದಿ. ಗಣಿತಗಳು, ಲೆಕ್ಕಪತ್ರಗಳು, ಕಾವ್ಯಗಳು, ಅಲಂಕಾರ ಶಾಸ್ತ್ರಗಳು, ಚಿತ್ರಕಲೆ, ಶಿಲ್ಪಕಲೆ, ಕುಶಲತೆ, ರಚನೆ ವಿತರಣೆ ಇತ್ಯಾದಿಯಿಂದ ಜೀವನವೆಂದರು ವರಾಹರು. ಮಂತ್ರಶ್ವರರು- ಆಗಮಶಾಸ್ತ್ರ, ಚತುರೋಪಾಯ ತಂತ್ರಶಾಸ್ತ್ರ ಪ್ರವೃತ್ತಿ, ಜ್ಯೋತಿಷ್ಯ ವೃತ್ತಿ, ಅದರ ಪಾಂಡಿತ್ಯ, ಖಗೋಲ ಪಾಂಡಿತ್ಯ, ಅಧ್ಯಯನ ಅಧ್ಯಾಪನ,ಪೌರೋಹಿತ್ಯ,ಪರೋಪಕಾರ,ಜಪಗಳು,ಮಹಾ ಜ್ಞಾನಾದಿ ಸರ್ವ ವಿಧದ ಪ್ರವೃತ್ತಿಗಳಿಂದ ಜೀವನವೆಂದರು. ವೈದ್ಯನಾಥರ ಅಭಿಪ್ರಾಯವೂ ಇದೇ ಆಗಿದೆ.


ಗುರುವಿನಿಂದ ಜೀವನವೃತ್ತಿ 


ಜೀವನವೃತ್ತಿಕಾರಕ ಅಂಶೇಶ ಗುರುವಾದರೆ- ಬ್ರಾಹ್ಮಣ ಕರ್ಮ, ವೇದಶಾಸ್ತ್ರ, ಕಲಿಸುವುದು, ದೇವಪೂಜೆ, ತಂತ್ರಮಂತ್ರ ಪ್ರವೃತ್ತಿ, ಅತಿಥಿಸತ್ಕಾರ, ಯಜ್ಞಯಾಗಾದಿ ಪ್ರವೃತ್ತಿ , ಅದಿಪದೇನ ಪೌರೋಹಿತ್ಯ, ಗೋಪೂಜೆ, ಸೇವೆ, ದಾನಗ್ರಹಣ, ದೇವತಾಕಾರ್ಯ, ಧರ್ಮಪ್ರವೃತ್ತಿ ದೇವಸ್ಥಾನ ಕಾರ್ಯ ಇವೆಲ್ಲದರಿಂದ ಜೀವನವೆಂದು ವರಾಹ ಮತವು . ಮಂತ್ರೇಶ್ವರರು- ರಾಜಾನುಗ್ರಹದಿಂದ ಧನಲಾಭ, ನೀತಿ ಮಾರ್ಗೋಪದೇಶ, ನ್ಯಾಯತೀರ್ಮಾನ, ಪುರಾಣಕಥನ, ಕಥಾದಿಗಳು ( ಹರಿಕಥಾದಿ ), ಬಡ್ಡಿ ವ್ಯವಹಾರ ಇತ್ಯಾದಿಯಿಂದ ಜೀವನ ವೃತ್ತಿ ಎಂದರು. ವೈದ್ಯನಾಥರು- ಅಧ್ಯಾಪಕ ವೃತ್ತಿಯನ್ನು ಸೇರಿಸಿದ್ದಾರೆ. 


ಶುಕ್ರನಿಂದ ಜೀವನವೃತ್ತಿ ಚಿಂತನೆ 


ಅಂಶೇಶ ಶುಕ್ರನಾದರೆ- ನವರತ್ನಗಳು, ಬೆಳ್ಳಿ ಮುಂತಾದ ಲೋಹಗಳು, ವಿವಿಧ ಮಣಿಗಳು, ಇವುಗಳ ವ್ಯಾಪಾರ ಇವುಗಳಿಂದ ವಸ್ತು ತಯಾರಿಕೆ. ಗೋವು ಎಮ್ಮೆ ಮೊದಲಾದ ಪಶುಗಳು ಹಾಲು ಹೈನ ಉತ್ಪತ್ತಿ ಆದಿಪದೇನ- ರತ್ನಾಭರಣ ತಯಾರಿ ವ್ಯಾಪಾರ, ಬೆಳ್ಳಿ ನಗನಾಣ್ಯ ಪಾತ್ರೆಗಳು, ಮಣಿಮಾಲೆಗಳು, ವ್ಯಾಪಾರಗಳು, ಗೋಸಾಕಣೆ, ಪಶುವ್ಯವಹಾರ, ಹಾಲುತುಪ್ಪ ಮೊದಲಾದ ಪಾನೀಯಾದಿ ವ್ಯಾಪಾರ ಇತ್ಯಾದಿ ವರಾಹ ಮತವು, ಮಂತ್ರೇಶ್ವರರು- ಸ್ತ್ರೀಸಹಾಯ, ಅನಕುದುರೆ ಮುಂತಾದ ಪ್ರಾಣಿವರ್ಗ, ಸುಗಂಧದ್ರವ್ಯ, ಅಲಂಕಾರವಸ್ತುಗಳು, ನೃತ್ಯ, ಸಂಗೀತ, ವಾದ್ಯ, ಮಂತ್ರಿತ್ವ, ಕವಿತ್ವ, ಆಚಾರ್ಯತ್ವ, ಪಟ್ಟೆವಸ್ತ್ರಗಳು, ನಾಟಕಾದಿ ಕಲೆಗಳು, ಇತ್ಯಾದಿ ರಚನೆ, ವ್ಯಾಪಾರಾದಿಯಿಂದ ಜೀವನವೆಂದರು. ವೈದ್ಯನಾಥರು- ಸ್ತ್ರೀಯರನ್ನು ಪುಸಲಾಯಿಸುವಿಕೆ, ಸ್ತ್ರೀ ಮೂಲಕ ಆದಾಯ, ಬೆಲ್ಲ,ಅನ್ನ,ಉಪ್ಪು , ಮೊಸರು,ಕ್ರಯವಿಕ್ರಯ ಇವನ್ನೂ ಸೇರಿಸಿದ್ದಾರೆ.


ಶನಿಯಿಂದ ಜೀವನವೃತ್ತಿ ಚಿಂತನೆ 


ಜೀವನವೃತ್ತಿಕಾರಕ ಅಂಶಪತಿ ಶನಿಯಾದರೆ- ಶ್ರಮದ ಕೆಲಸಗಳು, ಕಲ್ಲು, ಕಬ್ಬಿಣ ಮುಂತಾದ ವ್ಯವಹಾರ, ದಾರಿ ನಡೆಯುವುದು(ಸಾರಿಗೆ), ಭಾರ ಹೊರುವುದು, ಹಿಂಸಾತ್ಮಕ ಕೆಲಸ, ಪ್ರಾಣಿವಧೆ ಮುಂತಾದವು. ಆಚಾರಿಯ ಮರದ ಕೆಲಸ, ಕಬ್ಬಿಣದ ವಸ್ತು ತಯಾರಿ ಮುಂತಾದ ನೀಚಶಿಲ್ಪಗಳು ಇತ್ಯಾದಿಯಿಂದ ಜೀವನವೃತ್ತಿಯು, ಇದು ವರಾಹ ಮತವು.ಮಂತ್ರೇಶ್ವರರು- ಕಂದಮೂಲಗಳು, ಫಲವಸ್ತು, ಮರಮಟ್ಟು, ಶ್ರಮದ ಕೆಲಸ, ಭೃತ್ಯತನ, ಕುಧಾನ್ಯ ವ್ಯವಹಾರ, ನೀಚರ, ದುಷ್ಟರ ಧನ ಪ್ರಾಪ್ತಿ,ನೀಚವೃತ್ತಿಗಳು ಇತ್ಯಾದಿ ವ್ಯವಹಾರದಿಂದ ಜೀವನವೆಂದಿದ್ದಾರೆ. ವೈದ್ಯನಾಥರು ಜನವಂಚನೆ, ಪರಪೀಡೆ, ಪರಸ್ಪರ ವಿರೋಧ ಹಚ್ಚಿ ದುಡ್ಡು ಕಬಳಿಸುವುದು ಮುಂತಾದುವನ್ನು ಸೇರಿಸಿದ್ದಾರೆ. ಕರ್ಮೇಶನ ಅಂಶರಾಶಿಶೀಲ, ಗ್ರಹಶೀಲ, ಕರ್ಮಭಾವರಾಶಿ ಕಾರಕತ್ವ ಇವೆಲ್ಲವನ್ನು ಸೇರಿಸಿ ಜೀವನ ವೃತ್ತಿ ಕಂಡುಕೊಳ್ಳಬೇಕು. ಜಗತ್ತಿನ ಎಲ್ಲ ಉದ್ಯೋಗಗಳನ್ನು ಈ ವಿವರಣೆ ೭ ರಿಂದ ಚಿಂತಿಸ ಹೇಳಿದ್ದಾರೆ. ಶನಿಗೆ ವಧ ಎಂದೊಂದು ಶಬ್ದದಲ್ಲಿ- ವರಾಹ ಮಿಹಿರರು ಮುಗಿಸಿದರು. ಇದರಿಂದ ಚರ್ಮ, ಎಲುಬು, ಕೊಲೆ, ಪಿತೂರಿ, ಒಳಸಂಚು, ಕೋವಿಹೊಡೆತ, ಪಕ್ಷಿ, ಪ್ರಾಣಿವಧೆ, ಮೀನುಗಾರಿಕೆ, ಕೋಳಿಸಾಕಣೆ, ಹಂದಿ, ಕುರಿ, ಆಡು, ಇವುಗಳ ಮಾಂಸ, ಕೊಂಬು, ಹಣಿಗೆ, ದಂತಕೆತ್ತನೆ, ಮೆಟ್ಟು, ಹೆಣದ ಕೆಲಸ, ಚಿತೆ, ಸ್ಮಶಾನ, ಬಿದಿರು, ಹಗ್ಗ, ಉತ್ತರಕ್ರಿಯೆ, ಶ್ರಾದ್ಧದೂಟ, ಕ್ರಿಮಿನಾಶಕ, ಮಾಂಸ ವಿತರಣೆ , ಮಾಂಸಾಶನಶಾಲೆ, ಕತ್ತಿ, ಚೂರಿ, ಖಡ್ಗ, ಭರ್ಜಿ, ಕೀಟನಾಶಕ ವಿಷವಸ್ತು, ಕೊಲ್ಲುವ ಕಥೆ, ಯುದ್ಧ, ಕೊಲ್ಲುವ ಚಿತ್ರ, ಬಾಡಿಗೆ ಕೊಲೆ, ವಿವಿಧ ಹಿಂಸೆ, ಹೀಗೆ ಇವೆಲ್ಲವನ್ನೂ ವೃತ್ತಿಗೆ ಚಿಂತಿಸಬೇಕು.


 ಪ್ರಯತ್ನಾಪ್ರಯತ್ನದಿಂದ ಸಂಪಾದನೆ 

 

ಈ ಹೇಳಿದ ಅಂಶಪತಿಯು ಬಲಿಷ್ಠನಾಗಿದ್ದರೆ ಪ್ರಯತ್ನವಿಲ್ಲದೆ ಧನ ಸಂಗ್ರಹಿಸುತ್ತಾನೆ. ಬಲಹೀನನಾದರೆ ಅಲ್ಪ ಸಂಪಾದನೆ, ದಶಮೇಶನಿರುವ ರಾಶಿ ದಶಮರಾಶಿ ಅಂಶಪತಿಯ ರಾಶಿಯ ದಿಕ್ಕಿನಿಂದ ಜೀವನವೃತ್ತಿಯಿಂದ ಪ್ರತಿಫಲ ಲಭಿಸುವುದು . ಅಂಶೇಶನು ಅದೇ ರಾಶಿಯಲ್ಲಿದ್ದರೆ, ನೋಡಿದರೆ, ಸ್ವದೇಶದಲ್ಲಿ ಅನ್ಯಗ್ರಹರ ಯುತಿದೃಷ್ಟಿ ಇದ್ದರೆ, ಪರದೇಶದಲ್ಲಿ ಸಂಪಾದನೆ, ವೃತ್ತಿಕಾರಕ ರಾಶಿ ಚರವಾದರೆ ದೂರ ದೇಶದಲ್ಲಿ ಜೀವನವೃತ್ತಿ, ಸ್ಥಿರವಾದರೆ ಹತ್ತಿರದಲ್ಲಿ, ಉಭಯವಾದರೆ, ಸ್ವಲ್ಪ ದೂರದೇಶದಲ್ಲಿ ವೃತ್ತಿಯು. ಹೀಗಲ್ಲದೆ ಅಂಶಕಾಧಿಪನ ಅಂಶ ಚರವಾದರೆ ದೂರ, ಸ್ಥಿರವಾದರೆ ಹತ್ತಿರ ಪ್ರವೃತ್ತಿ ಎಂದೂ ಹೇಳಿದ್ದಾರೆ. ೧೦ ನೇ ಭಾವ ಆ ಭಾವಪತಿ ಭಾವರಾಶೀಶನ ಅಂಶರಾಶಿ, ಅಂಶೇಶ, ಸ್ಥಿತಗ್ರಹ, ನೋಡುವ ಗ್ರಹ. ಇವರೆಲ್ಲರ ಬಲಾಬಲವರಿತು ಜೀವನ ವೃತ್ತಿ ಸಂಬಂಧ ಕಂಡುಹಿಡಿಯಬೇಕು. ಎಲ್ಲರ ಕೊಡುಗೆ ಜೀವನಕ್ಕಿರುವುದಿದೆ. ಒಬ್ಬ ಆಚಾರ್ಯರು ಭಾಗ್ಯ ಭಾಗ್ಯೇಶರ ಕರ್ಮ ಕರ್ಮೇಶ ಧನಭಾವ ಧನೇಶ ಇವರಿಂದ ಜೀವನ ವೃತ್ತಿ ಸಂಬಂಧವಿದೆ ಎಂದರು.

ಜ್ಯೌತಿಷವಿಷಯಗಳು


वाचं न:स दधात्वनेककिरणस्त्रैलोक्यदीपो रवि:॥

रवि:= ऋ गतौ (ಋ ಗತೌ)ಧಾತು ಉತ್ಪನ್ನ ಪದ. ये ये गत्यर्थका:ते ते ज्ञानार्थका: |ಇದು ವ್ಯಾಕರಣ ಸಾಮಾನ್ಯ ನಿಯಮ.ಗತಿ ಎಂಬ ಅರ್ಥ ಇರುವ ಧಾತುವಿಗೆ ಜ್ಞಾನ ಎಂಬ ಇನ್ನೊಂದು ಅರ್ಥವನ್ನು ಗ್ರಹಿಸಬೇಕು.ಆದ್ದರಿಂದ रवि ಗ್ರಹ ಜ್ಞಾನಕಾರಕ ಎಂದು.आरोग्यं भास्करात् इच्छेत्।, अर्को नाशयते व्याधीन्।, आरोग्यं पद्मबन्धु:। ರವಿ ಗ್ರಹ ಆರೋಗ್ಯಕಾರಕ ಗ್ರಹ ಎಂದೂ ಈ ಶಾಸ್ತ್ರಪದಗಳಿಂದ  ತಿಳಿಯುವುದು.सूर्य आत्मा जगतस्तस्थुषश्च।=सूञ् प्राणिगर्भविमोचने। ಅಂದರೆ ಜಗತ್ತಿನ ಎಲ್ಲಾ ಚರಾಚರಗಳಿಗೂ ಸೂರ್ಯ ಗ್ರಹನೇ ಆಧಾರ.ವಿಶ್ವದ ಆತ್ಮ ಸೂರ್ಯ ಎಂದು.ರವಿ ಗ್ರಹ ಪ್ರಧಾನವಾಗಿ ಇನ್ನೂ ಬಹಳ ವಿಷಯಗಳಿಗೆ ಕಾರಕ.ಇಂಥಹ ಗುಣಗಳುಳ್ಳ,ವಿಶೇಷವಾಗಿ ಜ್ಞಾನಕ್ಕೆ ಅಧಿಪತಿ ಆಗಿರುವ ರವಿಗ್ರಹನು ನಮಗೆ ಮಾತಾಡುವ ಶಕ್ತಿ ಕೊಡಲಿ.

ज्योतींषि अधिकृत्य कृतं शास्त्रम्=ज्योतिषशास्त्रम् अथवा ज्यौतिषशास्त्रम्।। शास्ति इति शास्त्रम्। तज्ञ:(तत् जानाति इति)ज्योतिषि: अथवा ज्यौतिषि:।

ಸೂರ್ಯ ಕಿರಣಗಳನ್ನು ,ಚಲನೆಯನ್ನು ಆಧರಿಸಿ ವಿರಚಿತವಾದದ್ದು ಜ್ಯೋತಿಷ ಶಾಸ್ತ್ರ. ಯಾವುದು ಹೀಗೆ ಇರಬೇಕು ಇರಬಾರದು ಎಂದು ಶಾಸನ ಮಾಡುತ್ತದೆಯೋ  ಅದು ಶಾಸ್ತ್ರ.शास्ति (शासु अनुशिष्टौ)इति शास्त्रम्।


आरोग्यं पद्मबन्धुर्वितरतु विपुलां सम्पदं शीतरश्मि:    

भूलाभं भूमिपुत्र:सकलगुणयुतां वाग्विभूतिं च सौम्य:।।  

सौभाग्यं देवमन्त्री रिपुभयशमनं भार्गव:शौर्यमार्की        

दीर्घायु:सैंहिकेयो विपुलतरयशा:केतुराचन्द्रतारम्।।

 

ನವಗ್ರಹಗಳನ್ನು ಪೂಜಿಸುವುದರಿಂದ ಪ್ರಯೋಜನಗಳು:  

ಸೂರ್ಯಗ್ರಹಾರಾಧನೆಯಿಂದ― ಆರೋಗ್ಯ

ಚಂದ್ರಗ್ರಹ― ಬಹಳವಾದ ಸಂಪತ್ತು

ಅಂಗಾರಕನು―ಭೂಲಾಭ

ಬುಧಗ್ರಹ―ಎಲ್ಲಾ ಒಳ್ಳೆಯ ಗುಣಗಳಿಂದ ಕೂಡಿದ ವಾಗೈಶ್ವರ್ಯ 

ಗರು―ಸೌಭಾಗ್ಯ 

ಶುಕ್ರ―ಶತ್ರುಗಳಿಂದ ಉಂಟಾಗುವ ಭಯವನ್ನು ಶಮನಗೊಳಿಸುವುದು 

ಶನೈಶ್ಚರ―ಶೌರ್ಯ 

ರಾಹು―ದೀರ್ಘಾಯುಷ್ಯ 

ಕೇತು―ವಿವಿಧವಾದ ಯಶಸ್ಸು 

ಹೀಗೆ ನವಗ್ರಹರು  ಪೂಜಾಫಲವನ್ನು ಕೊಡುವರು.                                                              

(ವಿವಿಧವಾದ ಯಶಸ್ಸು ಎಂದರೇನು?   ಭಗವದ್ಗೀತೆಯಲ್ಲಿ  ಭಗವಂತ सम्भावितस्य चाकीर्तिर्मरणादतिरिच्यते।।  ಎಂದು ಭಗವದ್ಗೀತೆಯಲ್ಲಿ ಹೇಳಲ್ಪಟ್ಟಿದೆ. ಸಂಭಾವಿತ ವ್ಯಕ್ತಿಗೆ ಬರುವ ಅಕೀರ್ತಿ ಮರಣಕ್ಕಿಂತಲೂ ದೊಡ್ಡದು. ಈ ಯಶಸ್ಸನ್ನು ಎಲ್ಲಿಂದ  ಹೇಗೆ ಗಳಿಸಬಹುದು?    


काव्यं यशसे अर्थकृते शिवेतरक्षतये 

सद्य:परनिवृत्तये कान्तासंहिततया युजे।                                                         

ಕಾವ್ಯಾದಿಗಳನ್ನು,ರಾಮಯಣ,ಮಹಾಭಾರತ ಮೊದಲಾದವುಗಳನ್ನು ಅಧ್ಯಯನ ಮಾಡಿ  ನುಡಿದಂತೆ ನಡೆದರೆ  ಯಶಸ್ಸು, ಸುಜ್ಞಾನ, ಅಮಂಗಳ ನಿವಾರಣೆ, ಸದ್ಯ ಉಂಟಾಗುವ ಬೌದ್ಧಿಕ ಸಂಕಷ್ಟಗಳ ಉಪಶಮನ ಹಾಗೂ ಪತಿಯಾದವನಿಗೆ ಪತ್ನಿಯು ಜಾಗ್ರತಾ ಉದ್ದೇಶದಿಂದ ಹೇಗೆ ಹಿತವಾದ ಮಾತುಗಳನ್ನು ತಿಳಿಸಿ ಮುಂದೆ ಆಗಬಾರದಿರುವುದನ್ನು ತಡೆಯುವಳೋ ಅದೇ ರೀತಿಯಾಗಿ ಕಾವ್ಯಾದಿಗಳ ಅಧ್ಯಯನದ ಪ್ರಯೋಜನವು.ಹೀಗೆ ಅಧ್ಯಯನ ಮಾಡುವ ಬುಧ್ಧಿಯನ್ನು ಕೇತುಗ್ರಹಾರಾಧನೆಯಿಂದ ಕೇತುಗ್ರಹನು ಕರುಣಿಸುವನು.   

                      ಮಾಷ ಅಥವಾ ಉದ್ದಿನಲ್ಲಿ ರಾಹುಗ್ರಹಾರಾಧನೆಯನ್ನು ಮಾಡಿದಾಗ ದೀರ್ಘಾಯುಷ್ಯ ಪ್ರಾಪ್ತಿ ಅಷ್ಟೇ ಅಲ್ಲದೇ ರಾಹುಗ್ರಹ ನಿಮಿತ್ತ ದೋಷನಿವಾರಣೆಯೂ ಆಗುವುದು.ಉದ್ದಿನ ಸೇವನೆಯು ಮಾಂಸಸದೃಶ ಎನ್ನುವರು. ಉದ್ದು ತಿನ್ನುವುದರಿಂದ ಬುದ್ಧಿಯ ಮಟ್ಟ ಹ್ರಸ್ವ ಆಗುವುದಕ್ಕೆ ಒಂದು ಉದಾಹರಣೆ―  ಜ್ನಾನಪ್ರಕರ್ಷತೆ ಹಾಗೂ ತೀಕ್ಷ್ಣಬುದ್ಧಿಯಿಂದ ಕವಿಯು ಕಾವ್ಯರಚನೆಗಳನ್ನು  ಮಾಡುವನು. ಆ ಗ್ರಂಥಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾದ ಇತರ ಕವಿಗಳು ಗ್ರಂಥಗಳನ್ನು ಸುಟ್ಟು ಭಸ್ಮಮಾಡುವರು.ಇದನ್ನು ತಿಳಿದ ಕವಿಯು ಮರುದಿನವೂ ಕಾವ್ಯರಚನೆಯಲ್ಲಿ ತೊಡಗುವನು.ಆದರೆ ಎಲ್ಲಾ ಇತರ ಕವಿಗಳಿಗೂ ಅರ್ಥ ಆಗುವ ರೀತಿಯಲ್ಲಿ ರಚಿಸಿರುವುದನ್ನು ಮನಗಂಡು ಆ ಅಸದೃಶ ಕವಿಮಹಾಶಯನಲ್ಲಿ ಈ ರೀತಿ ಕೇಳುವರು―ಪ್ರಾರಂಭದ ದಿನಗಳಲ್ಲಿ ನೀವು ರಚಿಸಿರುವ ಯಾವ ಕಾವ್ಯಗಳನ್ನೂ ಅರ್ಥಮಾಡಲಾಗುತ್ತಿರಲಿಲ್ಲ , ಅದಕ್ಕಾಗಿ ಅವುಗಳನ್ನು ನಾಶಮಾಡುತ್ತಿದ್ದೆವು.ಆದರೆ ಇವತ್ತಿನ ನಿಮ್ಮ ಕಾವ್ಯರಚನೆಯು ಬಹಳ ಸುಲಲಿತವಾಗಿ ಅರ್ಥವಾಗುವಂತೆ ರಚಿತವಾಗಿದೆ.ಇದಕ್ಕೇನು ಕಾರಣ? ಎಂದಾಗ ಮಹಾಕವಿ ― शेमुषीमुषमाषमश्नाम्। ಎಂದನು.(ಕೇವಲ श  ಮತ್ತು म ದಿಂದ ವಾಕ್ಯ) ಶೇಮುಷೀ= ಬುದ್ಧಿ , ಮುಷ = ಬುದ್ಧಿಯನ್ನು ಕಡಿಮೆ ಮಾಡುವ, ಮಾಷಮ್ = ಉದ್ದನ್ನು ,ಅಶ್ನಾಮ್ = ತಿಂದೆನು.ಬುದ್ಧಿಯನ್ನು ತಗ್ಗಿಸುವ ಉದ್ದನ್ನು ತಿಂದು ಸುಲಲಿತವಾದ ಕಾವ್ಯ ರಚನೆಯಾಯಿತು ಎಂಬಲ್ಲಿ ಮಾಷವು ಬುದ್ಧಿಯನ್ನು ಕುಂಠಿತಗೊಳಿಸುವುದು―ಎಂಬುದು ಇಲ್ಲಿ ಗಮನಾರ್ಹ.  ಬುದ್ಧಿಯಲ್ಲಿ ಮೂರು ವಿಧ ― तैलबुद्धि, घृतबुद्धि ,मृत्पिण्डबुद्धि ಎಂದು.  ತೈಲಬುದ್ಧಿ ಎಂದರೆ  ಕೆರೆಯಲ್ಲಿ ಹಾಕಿದ ತೈಲಬಿಂದುವು ಕ್ಷಣಮಾತ್ರದಲ್ಲಿ ಕೆರೆನೀರಿನ ಮೇಲೆಲ್ಲಾ  ಚೆನ್ನಾಗಿ ಆವರಿಸುವುದು. ಅಂದರೆ ಒಂದು ವಿಷಯ ಹೇಳಿದ ತಕ್ಷಣ ಯಾರು ಅದರ ಪೂರ್ವಾಪರವನ್ನು ಸಂಪೂರ್ಣವಾಗಿ ತಿಳಿಯುವರೋ ಅವರ ಬುದ್ಧಿ ತೈಲಬುದ್ಧಿ.  ಆದರೆ ತುಪ್ಪದ ಬಿಂದುವನ್ನು ಕೆರೆ ನೀರಿಗೆ ಬಿಟ್ಟಾಗ ಅದು ಅಲ್ಲಿ ಮಾತ್ರ ಅಲ್ಲಲ್ಲಿ ಚದುರುವವು.ಎಂದರೆ ಒಂದು ವಿಷಯ ಹೇಳಿದಾಗ ಅದರ ಬಗ್ಗೆ ಎಲ್ಲಾ ತಿಳಿಯದಿದ್ದರೂ ಸ್ವಲ್ಪ ಮಾತ್ರ ತಿಳಿಯುವನು.ಇಂಥಹವರ ಬುದ್ಧಿಯು ಘೃತಬುದ್ಧಿಯು. ಮೃತ್ಪಿಂಡ ಅಂದರೆ ಮಣ್ಣಿನ ಉಂಡೆ ಅಥವಾ ಕಲ್ಲು . ಈ ಕಲ್ಲನ್ನು ಹಸಿಮಣ್ಣಿನ ಗೋಡೆಗೆ ಎಸೆದಾಗ ಆ ಕಲ್ಲು ಗಟ್ಟಿಯಾಗಿ ಅಲ್ಲೇ ಉಳಿಯುವುದು. ಅದೇ ರೀತಿಯಾಗಿ ಒಂದು ವಿಷಯ ಹೇಳಿದಾಗ ಆ ವಿಷಯಮಾತ್ರ ಬುದ್ಧಿಯಲ್ಲಿರುವುದು.ಇಂಥಹವರ ಬುದ್ಧಿಯು ಮೃತ್ಪಿಂಡ ಬುದ್ಧಿ ಎನಿಸುವುದು. ನಾವೆಲ್ಲರೂ ರವಿಗ್ರಹ, ಬುಧಗ್ರಹರಲ್ಲಿ ತೈಲಬುದ್ದಿಯನ್ನು ಕೊಡು ಎಂದು ಪ್ರಾರ್ಥಿಸೋಣ.                                                                 

ವೇದೋಕ್ತ ದೀರ್ಘಾಯುಷ್ಯ ಅಂದರೆ 100 ವರ್ಷಗಳು.शतमानं भवति शतायु:पुरुषश्शतेन्द्रिय आयुष्येवेन्द्रिये प्रतितिष्ठति। ಎಂದು ಬೇಡುತ್ತೇವೆ.                                                                               

ಆದರೆ ಜ್ಯೋತಿಷಶಾಸ್ತ್ರದಲ್ಲಿ (ಬೃಹಜ್ಜಾತಕದಲ್ಲಿ)   

      समा:षष्टिर्द्विघ्नी मनुजकरिणां पञ्च च निशा ಇತ್ಯಾದಿಯಾಗಿ ಪ್ರಮುಖ ಪ್ರಾಣಿಗಳ ಆಯುಸ್ಸನ್ನು ಹೇಳಿರುವರು.ಅದರಲ್ಲಿ ಮನುಷ್ಯನಿಗೆ ಮತ್ತು ಆನೆಗೆ ಸಮಾನವಾದ ಆಯು:ಪ್ರಮಾಣ ಹೇಳಿರುವರು.        मनुजकरिणाम्=ಮನುಷ್ಯರಿಗೆ ಮತ್ತು ಆನೆಗಳಿಗೆ      षष्टिर्द्विघ्नी=  2 ರಿಂದ ಗುಣಿಸಿದ 60 =120 ಆಯಿತು. ಅಲ್ಲದೇ 5 ದಿನಗಳು. 120ವರ್ಷಗಳು+5 ದಿನಗಳು ನಮ್ಮ ಮತ್ತು ಆನೆಗಳ ಆಯುಷ್ಯ(समा: ಸಮಾನವು)ಈ ಆಯು:ಪ್ರಮಾಣದಲ್ಲಿ ಒಬ್ಬ ಮನುಷ್ಯ ಒಂದು ಶಾಸ್ತ್ರ ಮಾತ್ರ ಕಲಿಯುವನು ಎಂದು ಪ್ರಾಜ್ಞರ ಅಭಿಪ್ರಾಯ .एकस्मिन् जन्मनि एकमेव शास्त्रम् । ಹೀಗೆ ನಾವೆಲ್ಲರೂ ದೀರ್ಘಾಯುಷ್ಯ ಕೊಡಪ್ಪ ದೇವರೇ.............ಎಂದು ಪ್ರಾರ್ಥಿಸುವ.)


ಪೂಜಾ ಹೋಮಾದಿಗಳಲ್ಲಿ ನವಗ್ರಹಗಳ ಪ್ರಾಧಾನ್ಯತೆ:              

 तेन विना तृणमपि न चलति।   

पूजास्तुतिप्रणतिभिर्मुदिता ग्रहास्ते 

कुर्वन्त्यनिष्टगतयोऽपि शुभप्रदा स्यु:।।                                                                                      

ಮೊದಲಾದ ಶಾಸ್ತ್ರವಾಕ್ಯಗಳಲ್ಲಿ ಹೇಳುವ ವಿಚಾರಗಳು:           

ನವಗ್ರಹಗಳ ಹೊರತಾಗಿ ಒಂದು ಹುಲ್ಲು ಕಡ್ಡಿಯೂ ಅಲ್ಲಾಡದು.ನವಗ್ರಹಗಳ ಅಧೀನದಲ್ಲೇ ಮನುಷ್ಯರ ದಿನಚರಿ.ನವಗ್ರಹಗಳ ಪೂಜೆ ಮಾಡುವುದರಿಂದ,ಸ್ತೋತ್ರಮಾಡುವುದರಿಂದ(ಹೊಗಳುವುದರಿಂದ) (स्तुति=स्तुञ् स्तुतौ),ನಮಸ್ಕಾರ ಮಾಡುವುದರಿಂದ(प्रणतिभि:=णमु प्रह्वत्वे शब्दे च)ಸಂತೋಷಗೊಂಡಂಥಹ ಗ್ರಹಗಳು (ಒಂದು ವೇಳೆ ನಮ್ಮ ಜಾತಕ ಪ್ರಕಾರ ಶುಭೇತರ ಫಲಕೊಡುವಲ್ಲಿ)ಅನಿಷ್ಟಗತಿಕರಾದರೂ ಬೇಕಾದಷ್ಟು  ಒಳ್ಳೆಯದನ್ನೇ ಮಾಡುತ್ತವೆ.(प्रकृष्टेण ददाति इति प्रदा:)                                                                                           

ನವಗ್ರಹಗಳನ್ನು ಪೂಜಿಸಲು ಸಲಭೋಪಾಯವನ್ನು ನಮ್ಮ, ಋಷಿಮುನಿಗಳು ಸಾಕ್ಷಾತ್ಕರಿಸಿ ಅದರಂತೆ ನಾವು ಇಂದು ಆಚರಿಸಿಕೊಂಡು ಬರುತ್ತಿದ್ದೇವೆ. ಗೋಧಿಯಲ್ಲಿ ಸೂರ್ಯಗ್ರಹ,ಭತ್ತದಲ್ಲಿ ಚಂದ್ರಗ್ರಹ,ತೊಗರಿಯಲ್ಲಿ ಅಂಗಾರಕಗ್ರಹ, ಹೆಸರುಕಾಳಲ್ಲಿ ಬುಧಗ್ರಹ,ಕಡಲೆಯಲ್ಲಿ ಬೃಹಸ್ಪತಿಗ್ರಹ,ಅವರೆಯಲ್ಲಿ ಶುಕ್ರಗ್ರಹ,ಎಳ್ಳಿನಲ್ಲಿ ಶನೈಶ್ಚರಗ್ರಹ,ಉದ್ದಿನಲ್ಲಿ(ಮಾಷ)ರಾಹುಗ್ರಹ,ಹುರುಳಿಯಲ್ಲಿ ಕೇತುಗ್ರಹ―ಈ ರೀತಿಯಾಗಿ ಪ್ರತಿಯೊಂದು ಗ್ರಹಗಳ ಸಾನ್ನಿಧ್ಯವನ್ನು ಮೇಲೆ ತಿಳಿಸಿದ ಧಾನ್ಯಗಳಲ್ಲಿ ಋಷಿಮುನಿಗಳು ಕಂಡುಕೊಂಡಿರುವರು.

               ಈ ರೀತಿಯಾಗಿ ಪೂರ್ವಾದಿ 9 ದಿಕ್ಕುಗಳಲ್ಲಿ ನವಗ್ರಹಧಾನ್ಯಗಳನ್ನಿಟ್ಟು ಶಾಸ್ತ್ರಬದ್ಧವಾಗಿ ಪೂಜಿಸಿದಲ್ಲಿ (ಅವರವರ ಪೂರ್ವಾರ್ಜಿತ ಕರ್ಮಗಳ ಅಂದರೆ ಪಾಪ ಪುಣ್ಯಗಳ  ಲೆಕ್ಕಾಚಾರಕ್ಕೆ ಸರಿಯಾಗಿ)ನವಗ್ರಹಗಳ ಕೃಪೆಗೆ ಪಾತ್ರರಾಗಿ ಸಂತೋಷವನ್ನನುಭವಿಸುವರು.


वातश्श्लेश्मविकारपादविहतिं चापत्तितन्द्रीश्रमान्  

भ्रान्तिं कुक्षिरुगन्तरुष्णभृतकध्वंसं च पार्श्वाहतिम् । 

भार्यापुत्रविपत्तिमङ्गविहतिं हृत्तापमर्कात्मजो

वृक्षाश्माक्षतिमाहकश्मलगणै: पीडां पिशाचादिभि:।।    

                  

ಶನಿಯು ಅನಿಷ್ಟಕಾರಕನಾಗಿದ್ದರೆ ವಾತರೋಗ,ಕಫವಿಕಾರ,ಪಾದಾಘಾತ,ಆಲಸ್ಯ,ಶ್ರಮ,ಚಿತ್ತಭ್ರಮಣೆ,ಉದರರೋಗ,ಅಂತರುಷ್ಣತೆ,ಕೆಲಸಗಾರರ ಹಾನಿ,ಪಾರ್ಶ್ವವಾಯು ಬಡಿತ,ಮಡದಿ ಮಕ್ಕಳಿಗೆ ಆಪತ್ತು,ಅಂಗಾವಯವಹಾನಿ,ಹೃದಯವಿದ್ರಾವಕ ಘಟನೆಗಳು,ಹೃದ್ರೋಗ,ಮರ,ಕಲ್ಲು,ಮುಂತಾದವುಗಳಿಂದ ಘಾಸಿಗೊಳ್ಳುವುದು,ಕಶ್ಮಲ,ನೀಚಗಣ,ಪಿಶಾಚಗಣ ಇತ್ಯಾದಿಗಳಿಂದ ಪೀಡೆ―ಈ ರೀತಿಯ ಫಲಗಳು.


ಹೋರಾಶಾಸ್ತ್ರದ ವ್ಯವಹಾರ ಜ್ಞಾನಾರ್ಥವಾಗಿ ಮೇಷಾದಿ ದ್ವಾದಶ ರಾಶಿಗಳು, ಕಾಲಪುರುಷನ ಅಂಗವಿಭಾಗಾದಿ ಸ್ಥಾನಗಳು ಮತ್ತು ಅದರ ಪ್ರಯೋಜನಗಳು.                                                                     

कालाङ्गानि वराङ्गमाननमुरो हृत्क्रोडवासोभृतो ।            

वस्तिर्व्यञ्जनमूरुजानुयुगले जङ्घे ततोऽङ्घ्रिद्वयम् ।।    

मेषाश्विप्रथमानवर्क्षचरणाश्चक्रस्थिता राशयो।              

राशिक्षेत्रगृहर्क्षभानिभवनं चैकार्थसम्प्रत्यया: ।। 

                       

(27 ನಕ್ಷತ್ರಗಳು.ಪ್ರತಿಯೊಂದು ನಕ್ಷತ್ರಗಳಿಗೂ 4 ಚರಣಗಳು. 27✘4=108 ಚರಣಗಳು. ಇವುಗಳು ಮೇಷಾದಿ 12 ರಾಶಿಗಳಿಗೆ ವಿಭಾಗವಾಗುವುದು.ಪ್ರತಿ ರಾಶಿಗೂ 9 ಚರಣಗಳು.(12✘9=108).  ಈ ಪ್ರಕಾರ 27 ನಕ್ಷತ್ರ ಚಕ್ರವು 12  ರಾಶಿಗಳಾಗಿರುವವು. ಈ ನಕ್ಷತ್ರ ಮಂಡಲಗಳು ವರ್ತುಲಾಕಾರವಾಗಿ ಭೂಭಾಗವನ್ನಾವರಿಸಿಕೊಂಡು ಇರುವುದರಿಂದ ಜ್ಯೋತಿಶ್ಚಕ್ರ ಅಥವಾ ಖಗೋಲವೆಂದು ಹೆಸರು.ಈ ನಕ್ಷತ್ರಗಳು ಭೂಮಂಡಲಕ್ಕೆ ಪ್ರದಕ್ಷಿಣೆ ಮಾಡುತ್ತಾ ಪಶ್ಚಿಮದಿಕ್ಕಿಗೆ ತಮ್ಮ ಗತಿಯನ್ನು ಮುಂದುವರಿಸುವುವು.ಅಶ್ವಿನೀ ಮೊದಲಾಗಿ ಒಂದರ ಕೆಳಗೊಂದು ಉದಯಿಸುತ್ತವೆ.ಈ ನಕ್ಷತ್ರಗಳು ಉದಯಿಸುವಾಗ ಮೊದಲು ಅಶ್ವಿನೀ ನಕ್ಷತ್ರದ 1 ನೆಯ ಚರಣವು, ಅನಂತರ ಕ್ರಮವಾಗಿ 2―3―4 ನೆಯ ಚರಣಗಳು ಉದಯಿಸಿ ಅನಂತರ ಭರಣೀ ನಕ್ಷತ್ರದ 1 ನೆಯ ಚರಣ ಉದಯವಾಗುತ್ತದೆ. ಈ ನಕ್ಷತ್ರಗಳು ಭೂಮಿಯ ಸುತ್ತಲೂ ವೃತ್ತ ರೂಪವಾಗಿ 360 ಭಾಗಗಳಿಂದ ಸುತ್ತಿಕೊಂಡು ಇದೆ.ಯಾವಾಗಲೂ 180 ಭಾಗಗಳೇ ದೃಶ್ಯಾರ್ಧ ಚಕ್ರವಾಗಿಯೂ ಉಳಿದ 180 ಭಾಗಗಳು ಅದೃಶ್ಯಾರ್ಧ ಚಕ್ರವಾಗಿಯೂ ಇರುತ್ತದೆ.ಭೂಭಾಗದ ಮೇಲೆ ಇರುವವರಿಗೆ ಯಾವಾಗಲೂ 27 ನಕ್ಷತ್ರಗಳು ಏಕಕಾಲದಲ್ಲಿ ಕಾಣಬರುವುದಿಲ್ಲ.ಅಶ್ವಿನೀ ನಕ್ಷತ್ರ 1 ನೆಯ ಚರಣ ಉದಯದಲ್ಲಿರುವಾಗ ಚಿತ್ತಾ ನಕ್ಷತ್ರದ 3 ನೆಯ ಚರಣವು ಅಸ್ತದಲ್ಲಿರುತ್ತದೆ. ದೃಶ್ಯಾರ್ಧ ಚಕ್ರ ಅಂದರೆ 180 ಭಾಗದಲ್ಲಿ  ಮಧ್ಯ ಭಾಗವಾದ 90 ನೆಯ ಭಾಗದಲ್ಲಿ ನಿಂತಿರುವವನಿಗೆ ಎರಡೂ ಕಡೆಯಲ್ಲೂ 90 ಭಾಗಗಳು ಕಾಣಬರುತ್ತವೆ. ಉದಾಹರಣೆಗೆ ವೃಷಭರಾಶಿಯಲ್ಲಿ 15 ನೆಯ ಭಾಗ ಉದಯದಲ್ಲಿ ಪೂರ್ವದಲ್ಲಿರುವಾಗ, ವೃಶ್ಚಿಕ ರಾಶಿಯ 15 ನೆಯ ಭಾಗ ಪಶ್ಚಿಮದಲ್ಲಿ ಅಸ್ತದಲ್ಲಿಯೂ, ಸಿಂಹ ರಾಶಿಯ 15 ನೆಯ ಭಾಗ ಕೆಳಭಾಗದಲ್ಲಿಯೂ(ಪಾತಾಳದಲ್ಲಿಯೂ) ,ಕುಂಭರಾಶಿಯ 15 ನೆಯ ಭಾಗ ಉಚ್ಚದಲ್ಲಿ ಅಂದರೆ ಅಂತರಿಕ್ಷದ ಮಧ್ಯ ಭಾಗದಲ್ಲಿಯೂ ಇರುತ್ತದೆ.                                                                                

ಈ ಜ್ಯೋತಿಶ್ಚಕ್ರದ ಪರಿಣಾಮವೇನೆಂದರೆ  ―                         

60 ವಿಕಲೆಗಳಿಗೆ =1 ಕಲೆ ,   

60 ಕಲೆಗಳಿಗೆ = 1 ಭಾಗ , 

30 ಭಾಗಗಳಿಗೆ 1 ರಾಶಿ, 

12 ರಾಶಿಗಳಿಗೆ 1 ಚಕ್ರ ಎಂದೂ, ಇಂಗ್ಲಿಷ್ ವೃತ್ತದ ಪ್ರಮಾಣ ಸಹ ಇದೇ ರೀತಿಯಾಗಿರುವುದು.   

60 ಸೆಕೆಂಡ್=1 ಮಿನಿಟ್, 

60 ಮಿನಿಟ್ 1 ಡಿಗ್ರಿ , 

360 ಡಿಗ್ರಿಗಳಿಗೆ 1 ವೃತ್ತ ಅಥವಾ ಸರ್ಕಲ್.                                                                                              

                 ಸಿದ್ಧಾಂತ ಶಾಸ್ತ್ರದ ಪ್ರಕಾರ 21600 ಕಲೆಗೆ 1 ವೃತ್ತ . ಇದರಲ್ಲಿ ಅಶ್ವಿನೀ ಆದಿಯಾಗಿ 27 ನಕ್ಷತ್ರಕ್ಕೆ ಪ್ರತಿನಕ್ಷತ್ರಕ್ಕೆ 801 ಕಲಾ ಪ್ರಕಾರ 27✘300=21600 ಆಗುತ್ತದೆ. ಈ ಸಂಖ್ಯೆಯನ್ನು ವಿಕಲೆಯನ್ನಾಗಿ ಮಾಡಲು 21600✘60=1296000 ಆಗುವುದು. ಈ ಭ ಚಕ್ರವನ್ನು ಸೂರ್ಯಾದಿ 9 ಗ್ರಹಗಳು ಅಪ್ರದಕ್ಷಿಣವಾಗಿ,ಪೂರ್ವದಿಕ್ಕಿಗೆ ಪ್ರತಿದಿನವೂ ಸಂಚರಿಸಿ ಭೋಗಿಸುವರು.ಇದು ಗ್ರಹಗಳಿಗೆ ಸರಿಯಾದ ಗತಿಯಾಗಿರುವುದು ಎಂದು ಸಿದ್ಧಾಂತಜ್ಞರ ಮತ.ಈ ಪ್ರಕಾರ ಪ್ರತಿದಿನ ಭೋಗಿಸುವುದರಿಂದ ಸೂರ್ಯಾದಿ  ಗ್ರಹಗಳಿಗೆ 1 ಸಾರಿ ಭ ಚಕ್ರವನ್ನು ಸುತ್ತಿ ಅಶ್ವಿನೀ ನಕ್ಷತ್ರದ 1 ನೆಯ ಕಲೆಗೆ ಬರುವುದಕ್ಕೆ ಬೇಕಾದ ಸಂವತ್ಸರ,ಮಾಸ,ದಿವಸಾದಿಗಳನ್ನು ಸಪ್ರಮಾಣವಾಗಿ ಮುಂದೆ ತಿಳಿಸುವೆ.                                                                 

ರಾಶಿಗೆ ಇರುವ ಪರ್ಯಾಯ ನಾಮಗಳು―

ಕ್ಷೇತ್ರಂ,  ಗೃಹಂ, ಋಕ್ಷಂ, ರಾಶಿ: , ಭವನಮ್


ಮೇಷಾದಿ 12 ರಾಶಿಗಳು ಕಾಲಪುರುಷನ ಅವಯವಗಳು ಆಗುವವು:-  

                                                                   ಮೇಷರಾಶಿಯು ಕಾಲಪುರುಷನ =

 ಶಿರಸ್ಸು (ವರಾಂಗ=ವರ ಅಂದರೆ ಉತ್ತಮ ಎಂದು.उत्तमाङ्गं  शिर:शीर्षम्―ಅಮರಕೋಶ),ವೃಷಭ=ಮುಖ, ಮಿಥುನ =ಕುತ್ತಿಗೆ ,  ಕಟಕ = ಕೈ ಸಹಿತವಾದ ದ್ವಿಭುಜ ಭಾಗ,  ಸಿಂಹ = ಹೃದಯ , ಕನ್ಯಾ = ಹೊಟ್ಟೆ , ತುಲಾ = ನಾಭಿಯ ಕೆಳಭಾಗ(वस्तिर्नाभेरधो द्वयो:―ಅಮರಕೋಶ― ಅಂದರೆ ನಾಭಿ ಮತ್ತು ನಾಭಿಯ ಕೆಳಭಾಗ) ,ವೃಶ್ಚಿಕ = ಗುಹ್ಯಪ್ರದೇಶ, ಧನು = ತೊಡೆಗಳು, ಮಕರ =ಕಾಲಮಧ್ಯದ ಗಂಟು(ಮೊಣಕಾಲು) , ಕುಂಭ = ಮಧ್ಯ ಗಂಟಿನ ಕೆಳಗಡೆ― ಪಾದದ ಮೇಲ್ಗಡೆಯ ಭಾಗ,  ಮೀನ =ಪಾದಗಳು. ಹೀಗೆ ಕಾಲಪುರುಷನ ಅವಯವಗಳಲ್ಲಿ ರಾಶಿಸ್ಥಾನಗಳು.                     

ಕಾಲಪುರುಷನ ಅವಯವಗಳಲ್ಲಿ ರಾಶಿಸ್ಥಾನಗಳ  ಪ್ರಯೋಜನಗಳು:―   

ಜನ್ಮಕಾಲದಲ್ಲಿ ಪಾಪಗ್ರಹಗಳಿಂದ ಆಕ್ರಾಂತವಾದ ರಾಶಿ ಕಾಲಪುರುಷನ ಯಾವ ಅಂಗವಾಗಿದೆಯೋ ಆ ಅಂಗದಲ್ಲಿ  (ಇತರ ಗ್ರಹರಾಶಿಸ್ಥಿತಿಗತಿಯ ಬಲಾಬಲ ವಿವೇಚಿಸಿ)ಅಂಗಹ್ರಸ್ವ ಅಥವಾ ಲೋಪ ದೋಷ ವ್ರಣಗಳನ್ನು ಹೇಳುವುದು. ಶುಭಗ್ರಹಗಳಿಂದ ಆಕ್ರಾಂತವಾದ ರಾಶಿಯು ಕಾಲಪುರುಷನ ಯಾವ ಅಂಗವಾಗಿದೆಯೋ  ಆ ಭಾಗದಲ್ಲಿ(ಇತರ ಎಲ್ಲಾ ಸ್ಥಿತಿಗತಿ ಬಲಾಬಲ ಪರಾಮರ್ಶಿಸಿ) ಪುಷ್ಟಿಯನ್ನು ಹೇಳುವುದು, ತಿಲ , ಯವ, ಮಚ್ಚೆ  ಮುಂತಾದ ಲಕ್ಷಣ ಚಿಹ್ನೆಗಳನ್ನು ಹೇಳುವುದು.


ಸ್ವರ್ಗ ನರಕ ನಿರ್ಣಯ                                                                                                            

देवेज्ये कर्मराशिस्थे व्ययराशिगतेऽपि वा ।                  

शुभग्रहेण सन्दृष्टे स्वर्गप्राप्तिर्नसंशय:।।                                                                                       

ಗುರುವು ದಶಮದಲ್ಲೋ ವ್ಯಯದಲ್ಲೋ ಇದ್ದು ಶುಭಗ್ರಹರ ದೃಷ್ಟಿ ಇದ್ದರೆ ಮರಣಾನಂತರ ಸ್ವರ್ಗ ಪ್ರಾಪ್ತಿಯು.ಇದರಲ್ಲಿ ಸಂಶಯವಿಲ್ಲ.


व्ययेशे पापमध्यस्थे नरके पतति ध्रुवम् ।                

तदीशे शुभमध्यस्थे स्वर्गलोके महीयते ।।                                                                                                  ವ್ಯಯಾಧಿಪತಿಯು ಪಾಪರ ಮಧ್ಯದಲ್ಲಿದ್ದರೆ ನಿಶ್ಚಯವಾಗಿಯು ನರಕಲೋಕದಲ್ಲಿ ಬೀಳುವನು.ವ್ಯಯೇಶನು ಶುಭರ ಮಧ್ಯದಲ್ಲಿದ್ದರೆ ಸ್ವರ್ಗ ಲೋಕದ ಪ್ರಾಪ್ತಿಯು.(ವ್ಯಯೇಶನು ಪಾಪಯುತನಾಗಿದ್ದರೆ, ವ್ಯಯದಲ್ಲಿ ಪಾಪನಿದ್ದರೆ, ವ್ಯಯಕ್ಕೆ ಪಾಪದೃಷ್ಟಿ ಇದ್ದರೆ, ವ್ಯಯೇಶನು ನೀಚನಾಗಿದ್ದರೆ, ವ್ಯಯದಲ್ಲಿ ರಾಹು ಕೇತು ಶನಿ ಕುಜರಿದ್ದರೆ ಅಥವಾ ಇಬ್ಬರ್ಯಾರಾದರೂ ವ್ಯಯದಲ್ಲಿದ್ದರೆ ಇವೆಲ್ಲ ನರಕಪತನ ಯೋಗಗಳು ಎಂದಿದ್ದಾರೆ.


होरेत्यहोरात्रविकल्पमेके वाञ्छन्ति पूर्वापरवर्णलोपात्।  

कर्मार्जितं पूर्वभवेसदादि यत्तस्य पक्तिं समभिव्यनक्ति।।      

ಪೂರ್ವ ವರ್ಣವಾದ ಅಕಾರವನ್ನು ಮತ್ತು ಅಂತ್ಯದ ತ್ರ  ಲೋಪ ಮಾಡಿದರೆ ಹೋರಾ ಎಂಬುದಾಗಿ ಅಹೋರಾತ್ರ ವಿಕಲ್ಪವನ್ನು ಹೇಳುವರು.ಹೋರಾಶಾಸ್ತ್ರವು(ಜ್ಯೋತಿಶ್ಶಾಸ್ತ್ರವು) ಭೂತವರ್ತಮಾನಭವಿಷ್ಯತ್ ಈ ಮೂರೂ ಕಾಲಗಳಲ್ಲಿ ನಡೆಯುವ ಶುಭಾಶುಭಮಿಶ್ರವಾದ ಕರ್ಮಫಲವನ್ನು ತಿಳಿಯಪಡಿಸುವುದು.                                                                                

यदुपचितमन्यजन्मनि शुभाशुभं तस्य जन्मन:पक्तिम्।    

व्यञ्जयति शास्त्रमेतत्तमसि द्रव्याणि दीप इव।।                                                                           

 ಹೋರಾ ಶಾಸ್ತ್ರವೆಂಬ ಜ್ಞಾನಚಕ್ಷುಸ್ಸಿನಿಂದ ಪೂರ್ವಜನ್ಮ ,ಇಹಜನ್ಮ ಮತ್ತು ಪರಜನ್ಮದ ಫಲವನ್ನು ಕತ್ತಲಲ್ಲಿರುವ ವಸ್ತುಗಳನ್ನು ದೀಪದಿಂದ ತಿಳಿಯುವಂತೆ ತಿಳಿಯಬಹುದು.

            

वेदस्य चक्षु:किल शास्त्रमेतत्।  

 

ಜ್ಯೋತಿಶ್ಶಾಸ್ತ್ರವನ್ನು ವೇದರಾಶಿಗಳ ಕಣ್ಣು ಎಂದು ಹೇಳಿರುವರು.ವೇದಾಂಗಗಳು 6.                                                                    

शिक्षा व्याकरणं छन्दो निरुक्तं ज्यौतिषं तथा।       

कल्पश्चेति षडङ्गानि वेदस्याहुर्ममनीषिण: ।। 


ಜ್ಯೋತಿಷಶಾಸ್ತ್ರವು ವೇದಾಂಗವೇ ಆದರೂ ವೇದಗಳ ಕಣ್ಣು ಎನ್ನುವುದು ಬಹಳ ಸ್ವಾರಸ್ಯಕರವಾದ ವಿಚಾರವಾಗಿದೆ.


राशीनामुदयो लग्नं ते तु मेषवृषादय:।                      

ग्रहयोगवियोगाभ्यां फलं चिन्त्यं शुभाशुभम्।।                                                                               

ಪೂರ್ವ ಕ್ಷಿತಿಜದಲ್ಲಿ ಮೇಷಾದಿ ರಾಶಿಗಳು ಉದಿಸುತ್ತಿರುತ್ತವೆ.ಜನ್ಮ ಪಡೆಯುವ ಪ್ರತಿಯೊಬ್ಬ ಮಾನವನ ಜನನ ಕಾಲದಲ್ಲಿ ಉದಿಸಿದ ಲಗ್ನದಿಂದ ಮತ್ತು ಚಲಿಸುತ್ತಿರುವ ಗ್ರಹರ ಯೋಗ ವಿಯೋಗಾದಿಗಳಿಂದ ಶುಭಾಶುಭ ಫಲಚಿಂತನೆಯನ್ನು ಜೀವಿತಕಾಲದಲ್ಲಿ ಮಾಡಿಕೊಳ್ಳುವುದು.                                                                                                              

लगति इति लग्नम्।(लगि गतौ धातु:)                                                                                     

ರಾಶಿಯಿಂದ ರಾಶಿಗೆ ಕ್ರಮಿಸುವುದನ್ನು लग्नम् ಎನ್ನುವುದು.

तद्वादशविभागस्तु तुल्या मेषादिसंज्ञका:।                    

प्रसिद्धा राशयस्सन्ति ग्रहास्त्वर्कादिसंज्ञका:।।                    

 ನಕ್ಞತ್ರಪಥದಲ್ಲಿರುವ 27 ವಿಭಾಗಗಳನ್ನು ಮೇಷ,ವೃಷಭ,ಮಿಥುನ,ಕಟಕ,ಸಿಂಹ,ಕನ್ಯಾ,ತುಲಾ,ವೃಶ್ಚಿಕ,ಧನು,ಮಕರ,ಕುಂಭ,ಮೀನ ಈ12 ಹೆಸರುಗಳ ಅನ್ವರ್ಥಕ ಆಕೃತಿಯಂತೆ ಕಂಡುಹಿಡಿದು ಮೇಷಾದಿ 12 ರಾಶಿಗಳನ್ನು ಕಲ್ಪಿಸಿದ್ದಾರೆ.ಇವುಗಳು ಚಲಿಸದೆ ಇರುವ 27 ನಕ್ಷತ್ರಪುಂಜಗಳೂ ಮೇಷಾದಿ 12 ರಾಶಿಪುಂಜಗಳೂ ಆಗಿವೆ.ಚಲಿಸುವ ಬಿಂಬಗಳಿಗೆ ರವ್ಯಾದಿ ಸಂಜ್ಞೆಗಳು.


तानि नक्षत्रनामानि स्थिरस्थानानि यानि वै।                  

गच्छन्तो यानि गृह्णन्ति सततं ये तु ते ग्रहा:।।                                                                                        ಚಲನೆ ಇಲ್ಲದೆ ಸ್ಥಿರವಾಗಿರುವವುಗಳು ಅಶ್ವಿನ್ಯಾದಿ 27  ನಕ್ಷತ್ರಪುಂಜಗಳು.ಉಳಿದ ಕೆಲವು ಚಲಿಸುವ            ಜ್ಯೋತಿರ್ಬಿಂಬಗಳು ಗ್ರಹಗಳು.ಈ ಗ್ರಹಗಳು ಚಲಿಸುತ್ತಾ ನಕ್ಷತ್ರಗಳನ್ನು ಸದಾ ಹಿಡಿದು(ಹಿಡಿದಂತೆ ತೋರುವುದು ಮಾತ್ರ)ಕ್ರಮಿಸುತ್ತಾ ಮುಂದುವರಿಯುತ್ತಿರುತ್ತಾರೆ.                                   

 न क्षरति न गच्छति इति नक्षत्रम्।                                                                                           ನಕ್ಷತ್ರಗಳು ಚಲಿಸುವುದಿಲ್ಲವೆಂದು ಪೂರ್ವಾಚಾರ್ಯರುಗಳ ಮತವಾಗಿದೆ.ಕುಜಾದಿ ಗ್ರಹಗಳು ತಮ್ಮ ತಮ್ಮ ಅಕ್ಷದಲ್ಲಿ ಸಂಚರಿಸುವಾಗ ಕ್ರಾಂತಿವೃತ್ತದ ನಕ್ಷತ್ರ ಪಥದಲ್ಲಿ ನಕ್ಷತ್ರಗಳು ಸಂಚರಿಸುವಂತೆ ತೋರುತ್ತಿರುತ್ತವೆ.