Friday, November 27, 2020

ರವ್ಯಾದಿಗ್ರಹರಿಂದ ಜೀವನವೃತ್ತಿ.

 ರವ್ಯಾದಿ ಗ್ರಹರ ಜೀವನ ವೃತ್ತಿಕಾರಕತ್ವ -  


ಅರ್ಕಾಂಶೇ ತೃಣಕನಕೋರ್ಣಭೇಷಜಾದ್ಯೈಶ್ಚಂದ್ರಾಂಶೇ ಕೃಷಿಜಲಜಾಂಗನಾಶ್ರಯಾಚ್ಚ ।

ಧಾತ್ವಗ್ನಿಪ್ರಹರಣಸಾಹಸೈ:ಕುಜಾಂಶೇ ಸೌಮ್ಯಾಂಶೇ ಲಿಪಿಗಣಿತಾದಿ ಕಾವ್ಯಶಿಲ್ಪೈ:।।

ಜೀವಾಂಶೇ ದ್ವಿಜವಿಬುಧಾಕರಾದಿಧರ್ಮೈ : ಕಾವ್ಯಾಂಶೇ ಮಣಿರಜತಾದಿ ಗೋಮಹಿಷ್ಯೈ: । 

ಸೌರಾಂಶೇ ಶ್ರಮವಧಭಾರನೀಚಶಿಲ್ಪೈ: ಕರ್ಮೇಶಾದ್ಯುಷಿತ ಸಮಾನ ಕರ್ಮಸಿದ್ಧಿ:।।


 ರವಿಯಿಂದ ಜೀವನವೃತ್ತಿ -


 ಲಗ್ನ ಚಂದ್ರ ರವಿಗಳಲ್ಲಿ ಬಲಿಷ್ಠರು ಯಾರೋ ಅವರ ಕರ್ಮೇಶನ ನವಾಂಶದ ಅಧಿಪನು ರವಿಯಾಗಿದ್ದರೆ ಹುಲ್ಲು, ಬಂಗಾರ, ಉಣ್ಣೆ, ಔಷಧಿ ಇವುಗಳಿಂದ ಜೀವನ ವೃತ್ತಿ ಎಂದು ವರಾಹಮತವು . ಆದ್ಯೈ: ಎಂದಿರುವುದರಿಂದ ಹುಲ್ಲಿಗೆ ಸಂಬಂಧಪಟ್ಟ ಚಾಪೆ, ಹುಲ್ಲಿನ ರಸಗಳು, ಹುಲ್ಲುಗಾವಲು, ಒಣ ಹುಲ್ಲು, ಬಂಗಾರ, ಅದರ ಒಡವೆ, ಬಂಗಾರದ ಭಸ್ಮ, ಬಂಗಾರದ ಲೇಪ, ಬಂಗಾರದೊಡವೆ ತಯಾರಿ, ವ್ಯಾಪಾರ, ಉಣ್ಣೆ, ಕಂಬಳಿ, ಕುರಿ, ಕಂಬಳಿ ವ್ಯಾಪಾರ, ಕಂಬಳಿ ತಯಾರಿ, ಔಷಧ ತಯಾರಿ, ಔಷಧ ವ್ಯಾಪಾರ, ಔಷಧ ಕೊಡುವ ವೈದ್ಯವೃತ್ತಿ , ಆರೋಗ್ಯಶಾಲೆ, ಚಿಕಿತ್ಸೆ, ಗಿಡಮೂಲಿಕೆ ವಹಿವಾಟು- ಹೀಗೆ ಇವನ್ನೆಲ್ಲ ವಿವರವಾಗಿ ಅರಿಯಲು ಆದ್ಯೈ: ಎಂದಿರುವರು ವರಾಹಮಿಹಿರರು . ಇತರ ಆಚಾರ್ಯರು ಹೇಳಿದಂತೆ-ಮಂತ್ರೇಶ್ವರರು- ಫಲವೃಕ್ಷಗಳು, ಮಂತ್ರಜಪಾದಿಗಳು, ಠಕ್ಕು ಮೋಸದ ಕೆಲಸಗಳು, ಜೂಜುಕಟ್ಟೆ, ಸುಳ್ಳು, ಕಂಬಳಿ, ಔಷಧಗಳು, ಧಾತುಕ್ರಯಗಳು, ರಾಜಸೇವೆ ಇತ್ಯಾದಿಯನ್ನು ರವಿಯ ವೃತ್ತಿಗೆ ಹೇಳಿದ್ದಾರೆ . ಈ ಗ್ರಹರು ಇರುವ ರಾಶಿಭಾವಗಳನ್ನೂ ನೋಡಿಕೊಂಡು ವೃತ್ತಿಗೆ ಸೇರಿಸಬೇಕು. ಹಲವಾರು ವೃತ್ತಿಯನ್ನು ಒಬ್ಬ ಮಾಡುವುದಿದೆ.  


ಚಂದ್ರನಿಂದ ಜೀವನ ವೃತ್ತಿ - 


ಜೀವನ ವೃತ್ತಿಗೆ ಹಿಂದೆ ಹೇಳಿದಂತೆ ಕಾರಕನು ಚಂದ್ರನಾದರೆ ಕೃಷಿ , ಜಲದಿಂದ ಉತ್ಪತ್ತಿಯಾಗುವ ಸಕಲ ವಸ್ತು , ಸ್ತ್ರೀಯ ಆಶ್ರಯ ಇತ್ಯಾದಿ ಪ್ರವೃತ್ತಿಯೋ ಇವುಗಳಿಗೆ ಸಂಬಂಧಪಟ್ಟ ಸಕಲ ವಸ್ತು ವ್ಯಾಪಾರ ವನ್ನೋ ಮಾಡಿ ಜೀವನ ನಡೆಸುತ್ತಾನೆ . ಇದು ವರಾಹಮಿಹಿರರ ಮತ . ಮಂತ್ರೇಶ್ವರರು ತಮ್ಮ ಫಲದೀಪಿಕಾ ಗ್ರಂಥದಲ್ಲಿ - ಜೀವನ ವೃತ್ತಿಕಾರಕ ಚಂದ್ರನಾದರೆ- ಜಲದಲ್ಲಿ ಉತ್ಪತ್ತಿಯಾಗುವ ಮುತ್ತು, ಮೀನು, ನೌಕೆ ಮುಂತಾದ ವ್ಯಾಪಾರ, ಕೃಷಿ, ಕೃಷಿ ಸಲಕರಣೆ, ಧವಸಧಾನ್ಯ, ಗೋವು, ಎಮ್ಮೆ ಕೋಣ, ದನದ ಹಾಲು ಬೆಣ್ಣೆ, ಮೊಸರು, ತುಪ್ಪ ( ನೊಗ, ನೇಗಿಲು, ಹಗ್ಗ, ಧಾನ್ಯ, ಬೇಳೆ, ಬಲೆ, ದೋಣಿ, ವಿವಿಧ ಮೀನುಗಾರಿಕೆ, ಹಡಗು ಯಾನ, ಕಮಲ, ಏತದ ಯಂತ್ರ ಇತ್ಯಾದಿ ವಿನಾ ) ತೀರ್ಥಾಟನೆ, ಸ್ತ್ರೀಸಹಾಯ, ಸ್ತ್ರೀಧನ, ಜವುಳಿ ವ್ಯಾಪಾರ, ರೇಶ್ಮೆ ಬಟ್ಟೆಬರೆ ತಯಾರಿ, ಮಗ್ಗ, ಬಳೆ, ಅಲಂಕಾರಸಾಧನಾದಿ ಸರ್ವ ವ್ಯಾಪಾರದಿಂದ ಎಂದರು . ವೈದ್ಯನಾಥರು ಮಣ್ಣು, ವಾದ್ಯ ವಿಶೇಷ, ರಾಣೀ ಜನಾಶ್ರಯ ಇವನ್ನು ಸೇರಿಸಿದ್ದಾರೆ .


ಕುಜನಿಂದ ಜೀವನವೃತ್ತಿ


 ಕುಜನು ಜೀವನ ವೃತ್ತಿಕಾರಕನಾದರೆ- ಬಂಗಾರ, ಬೆಳ್ಳಿ, ಕಬ್ಬಿಣ, ಇತರ ಲೋಹಗಳು ಇತ್ಯಾದಿ ಧಾತು ಪದಾರ್ಥಗಳು, ಬೆಂಕಿಯಿಂದ ಬೇಯಿಸಿದ ಕುದಿಸಿದ ಪರಿವರ್ತಿಸಿದ ವಸ್ತುಗಳು, ಗಂಧಕ, ಮನಶ್ಯಿಲೆ, ಹೋಮ, ಪಾಕ, ಆಭರಣಗಳು, ಅಸ್ತ್ರಶಸ್ತ್ರಗಳು, ಕುಟ್ಟಿ ಪುಡಿಗೈದ ವಸ್ತುಗಳು, ಯಂತ್ರಗಳು, ಯುದ್ಧಸಾಹಸ ಸ್ಪರ್ಧೆ ಹೀಗೆ ಇವುಗಳ ಸಂಬಂಧಿತ ಪ್ರವೃತ್ತಿ, ವ್ಯಾಪಾರಗಳಿಂದ ಜೀವನವೆಂದು ವರಾಹಮಿಹಿರರ ಮತವು. ಮಂತ್ರೇಶ್ವರರು ಇವೆಲ್ಲವನ್ನೂ ಹೇಳಿ ಭೂಮಿ, ಅದಕ್ಕೆ ಸಂಬಂಧಪಟ್ಟ ಸರ್ವ ವ್ಯವಹಾರ, ಖನಿಜವಸ್ತುಗಳು, ಅಡಿಗೆಶಾಲೆಯ ಸಕಲ ಪ್ರವೃತ್ತಿಗಳು, ಪರೋಪದ್ರವದ ಕೆಲಸಗಳು, ಆಯುಧ ಪ್ರವೃತ್ತಿ, ಮ್ಲೇಂಛ ಜನಾಶ್ರಯ ಸೂಚಕ, ಗುಪ್ತಚಾರ, ಚೋರವೃತ್ತಿ, ಇತ್ಯಾದಿ ಪ್ರವೃತ್ತಿ ವ್ಯಾಪಾರಾದಿಗಳಿಂದ ಜೀವನವೆಂದರು . ವೈದ್ಯನಾಥರು ಇವೆಲ್ಲವನ್ನು ಹೇಳಿ ಇದ್ದಲು, ನೂಲು,ಹೊಲಿಗೆ, ಇವುಗಳ ತಯಾರಿ, ಯುದ್ಧವಿದ್ಯೆ ಇವನ್ನು ಸೇರಿಸಿದ್ದಾರೆ. 


ಬುಧನಿಂದ ಜೀವನವೃತ್ತಿ 


ಅಂಶಪತಿ ಜೀವನಕಾರಕ ಬುಧನಾದರೆ- ಅಕ್ಷರ, ಬರವಣಿಗೆ, ಪುಸ್ತಕ ಬರೆಯುವುದು, ಕಲಿಸುವುದು, ಗ್ರಂಥರಚನೆ, ಮುದ್ರಣ ಇವುಗಳಿಗೆಲ್ಲ ಸಂಬಂಧಪಟ್ಟ ಸಕಲ ಪ್ರವೃತ್ತಿ, ವ್ಯಾಪಾರ, ರಚನೆ ಇತ್ಯಾದಿ. ಗಣಿತಗಳು, ಲೆಕ್ಕಪತ್ರಗಳು, ಕಾವ್ಯಗಳು, ಅಲಂಕಾರ ಶಾಸ್ತ್ರಗಳು, ಚಿತ್ರಕಲೆ, ಶಿಲ್ಪಕಲೆ, ಕುಶಲತೆ, ರಚನೆ ವಿತರಣೆ ಇತ್ಯಾದಿಯಿಂದ ಜೀವನವೆಂದರು ವರಾಹರು. ಮಂತ್ರಶ್ವರರು- ಆಗಮಶಾಸ್ತ್ರ, ಚತುರೋಪಾಯ ತಂತ್ರಶಾಸ್ತ್ರ ಪ್ರವೃತ್ತಿ, ಜ್ಯೋತಿಷ್ಯ ವೃತ್ತಿ, ಅದರ ಪಾಂಡಿತ್ಯ, ಖಗೋಲ ಪಾಂಡಿತ್ಯ, ಅಧ್ಯಯನ ಅಧ್ಯಾಪನ,ಪೌರೋಹಿತ್ಯ,ಪರೋಪಕಾರ,ಜಪಗಳು,ಮಹಾ ಜ್ಞಾನಾದಿ ಸರ್ವ ವಿಧದ ಪ್ರವೃತ್ತಿಗಳಿಂದ ಜೀವನವೆಂದರು. ವೈದ್ಯನಾಥರ ಅಭಿಪ್ರಾಯವೂ ಇದೇ ಆಗಿದೆ.


ಗುರುವಿನಿಂದ ಜೀವನವೃತ್ತಿ 


ಜೀವನವೃತ್ತಿಕಾರಕ ಅಂಶೇಶ ಗುರುವಾದರೆ- ಬ್ರಾಹ್ಮಣ ಕರ್ಮ, ವೇದಶಾಸ್ತ್ರ, ಕಲಿಸುವುದು, ದೇವಪೂಜೆ, ತಂತ್ರಮಂತ್ರ ಪ್ರವೃತ್ತಿ, ಅತಿಥಿಸತ್ಕಾರ, ಯಜ್ಞಯಾಗಾದಿ ಪ್ರವೃತ್ತಿ , ಅದಿಪದೇನ ಪೌರೋಹಿತ್ಯ, ಗೋಪೂಜೆ, ಸೇವೆ, ದಾನಗ್ರಹಣ, ದೇವತಾಕಾರ್ಯ, ಧರ್ಮಪ್ರವೃತ್ತಿ ದೇವಸ್ಥಾನ ಕಾರ್ಯ ಇವೆಲ್ಲದರಿಂದ ಜೀವನವೆಂದು ವರಾಹ ಮತವು . ಮಂತ್ರೇಶ್ವರರು- ರಾಜಾನುಗ್ರಹದಿಂದ ಧನಲಾಭ, ನೀತಿ ಮಾರ್ಗೋಪದೇಶ, ನ್ಯಾಯತೀರ್ಮಾನ, ಪುರಾಣಕಥನ, ಕಥಾದಿಗಳು ( ಹರಿಕಥಾದಿ ), ಬಡ್ಡಿ ವ್ಯವಹಾರ ಇತ್ಯಾದಿಯಿಂದ ಜೀವನ ವೃತ್ತಿ ಎಂದರು. ವೈದ್ಯನಾಥರು- ಅಧ್ಯಾಪಕ ವೃತ್ತಿಯನ್ನು ಸೇರಿಸಿದ್ದಾರೆ. 


ಶುಕ್ರನಿಂದ ಜೀವನವೃತ್ತಿ ಚಿಂತನೆ 


ಅಂಶೇಶ ಶುಕ್ರನಾದರೆ- ನವರತ್ನಗಳು, ಬೆಳ್ಳಿ ಮುಂತಾದ ಲೋಹಗಳು, ವಿವಿಧ ಮಣಿಗಳು, ಇವುಗಳ ವ್ಯಾಪಾರ ಇವುಗಳಿಂದ ವಸ್ತು ತಯಾರಿಕೆ. ಗೋವು ಎಮ್ಮೆ ಮೊದಲಾದ ಪಶುಗಳು ಹಾಲು ಹೈನ ಉತ್ಪತ್ತಿ ಆದಿಪದೇನ- ರತ್ನಾಭರಣ ತಯಾರಿ ವ್ಯಾಪಾರ, ಬೆಳ್ಳಿ ನಗನಾಣ್ಯ ಪಾತ್ರೆಗಳು, ಮಣಿಮಾಲೆಗಳು, ವ್ಯಾಪಾರಗಳು, ಗೋಸಾಕಣೆ, ಪಶುವ್ಯವಹಾರ, ಹಾಲುತುಪ್ಪ ಮೊದಲಾದ ಪಾನೀಯಾದಿ ವ್ಯಾಪಾರ ಇತ್ಯಾದಿ ವರಾಹ ಮತವು, ಮಂತ್ರೇಶ್ವರರು- ಸ್ತ್ರೀಸಹಾಯ, ಅನಕುದುರೆ ಮುಂತಾದ ಪ್ರಾಣಿವರ್ಗ, ಸುಗಂಧದ್ರವ್ಯ, ಅಲಂಕಾರವಸ್ತುಗಳು, ನೃತ್ಯ, ಸಂಗೀತ, ವಾದ್ಯ, ಮಂತ್ರಿತ್ವ, ಕವಿತ್ವ, ಆಚಾರ್ಯತ್ವ, ಪಟ್ಟೆವಸ್ತ್ರಗಳು, ನಾಟಕಾದಿ ಕಲೆಗಳು, ಇತ್ಯಾದಿ ರಚನೆ, ವ್ಯಾಪಾರಾದಿಯಿಂದ ಜೀವನವೆಂದರು. ವೈದ್ಯನಾಥರು- ಸ್ತ್ರೀಯರನ್ನು ಪುಸಲಾಯಿಸುವಿಕೆ, ಸ್ತ್ರೀ ಮೂಲಕ ಆದಾಯ, ಬೆಲ್ಲ,ಅನ್ನ,ಉಪ್ಪು , ಮೊಸರು,ಕ್ರಯವಿಕ್ರಯ ಇವನ್ನೂ ಸೇರಿಸಿದ್ದಾರೆ.


ಶನಿಯಿಂದ ಜೀವನವೃತ್ತಿ ಚಿಂತನೆ 

ಜೀವನವೃತ್ತಿಕಾರಕ ಅಂಶಪತಿ ಶನಿಯಾದರೆ- ಶ್ರಮದ ಕೆಲಸಗಳು, ಕಲ್ಲು, ಕಬ್ಬಿಣ ಮುಂತಾದ ವ್ಯವಹಾರ, ದಾರಿ ನಡೆಯುವುದು(ಸಾರಿಗೆ), ಭಾರ ಹೊರುವುದು, ಹಿಂಸಾತ್ಮಕ ಕೆಲಸ, ಪ್ರಾಣಿವಧೆ ಮುಂತಾದವು. ಆಚಾರಿಯ ಮರದ ಕೆಲಸ, ಕಬ್ಬಿಣದ ವಸ್ತು ತಯಾರಿ ಮುಂತಾದ ನೀಚಶಿಲ್ಪಗಳು ಇತ್ಯಾದಿಯಿಂದ ಜೀವನವೃತ್ತಿಯು, ಇದು ವರಾಹ ಮತವು.ಮಂತ್ರೇಶ್ವರರು- ಕಂದಮೂಲಗಳು, ಫಲವಸ್ತು, ಮರಮಟ್ಟು, ಶ್ರಮದ ಕೆಲಸ, ಭೃತ್ಯತನ, ಕುಧಾನ್ಯ ವ್ಯವಹಾರ, ನೀಚರ, ದುಷ್ಟರ ಧನ ಪ್ರಾಪ್ತಿ,ನೀಚವೃತ್ತಿಗಳು ಇತ್ಯಾದಿ ವ್ಯವಹಾರದಿಂದ ಜೀವನವೆಂದಿದ್ದಾರೆ. ವೈದ್ಯನಾಥರು ಜನವಂಚನೆ, ಪರಪೀಡೆ, ಪರಸ್ಪರ ವಿರೋಧ ಹಚ್ಚಿ ದುಡ್ಡು ಕಬಳಿಸುವುದು ಮುಂತಾದುವನ್ನು ಸೇರಿಸಿದ್ದಾರೆ. ಕರ್ಮೇಶನ ಅಂಶರಾಶಿಶೀಲ, ಗ್ರಹಶೀಲ, ಕರ್ಮಭಾವರಾಶಿ ಕಾರಕತ್ವ ಇವೆಲ್ಲವನ್ನು ಸೇರಿಸಿ ಜೀವನ ವೃತ್ತಿ ಕಂಡುಕೊಳ್ಳಬೇಕು. ಜಗತ್ತಿನ ಎಲ್ಲ ಉದ್ಯೋಗಗಳನ್ನು ಈ ವಿವರಣೆ ೭ ರಿಂದ ಚಿಂತಿಸ ಹೇಳಿದ್ದಾರೆ. ಶನಿಗೆ ವಧ ಎಂದೊಂದು ಶಬ್ದದಲ್ಲಿ- ವರಾಹ ಮಿಹಿರರು ಮುಗಿಸಿದರು. ಇದರಿಂದ ಚರ್ಮ, ಎಲುಬು, ಕೊಲೆ, ಪಿತೂರಿ, ಒಳಸಂಚು, ಕೋವಿಹೊಡೆತ, ಪಕ್ಷಿ, ಪ್ರಾಣಿವಧೆ, ಮೀನುಗಾರಿಕೆ, ಕೋಳಿಸಾಕಣೆ, ಹಂದಿ, ಕುರಿ, ಆಡು, ಇವುಗಳ ಮಾಂಸ, ಕೊಂಬು, ಹಣಿಗೆ, ದಂತಕೆತ್ತನೆ, ಮೆಟ್ಟು, ಹೆಣದ ಕೆಲಸ, ಚಿತೆ, ಸ್ಮಶಾನ, ಬಿದಿರು, ಹಗ್ಗ, ಉತ್ತರಕ್ರಿಯೆ, ಶ್ರಾದ್ಧದೂಟ, ಕ್ರಿಮಿನಾಶಕ, ಮಾಂಸ ವಿತರಣೆ , ಮಾಂಸಾಶನಶಾಲೆ, ಕತ್ತಿ, ಚೂರಿ, ಖಡ್ಗ, ಭರ್ಜಿ, ಕೀಟನಾಶಕ ವಿಷವಸ್ತು, ಕೊಲ್ಲುವ ಕಥೆ, ಯುದ್ಧ, ಕೊಲ್ಲುವ ಚಿತ್ರ, ಬಾಡಿಗೆ ಕೊಲೆ, ವಿವಿಧ ಹಿಂಸೆ, ಹೀಗೆ ಇವೆಲ್ಲವನ್ನೂ ವೃತ್ತಿಗೆ ಚಿಂತಿಸಬೇಕು.


 ಪ್ರಯತ್ನಾಪ್ರಯತ್ನದಿಂದ ಸಂಪಾದನೆ 

 ಈ ಹೇಳಿದ ಅಂಶಪತಿಯು ಬಲಿಷ್ಠನಾಗಿದ್ದರೆ ಪ್ರಯತ್ನವಿಲ್ಲದೆ ಧನ ಸಂಗ್ರಹಿಸುತ್ತಾನೆ. ಬಲಹೀನನಾದರೆ ಅಲ್ಪ ಸಂಪಾದನೆ, ದಶಮೇಶನಿರುವ ರಾಶಿ ದಶಮರಾಶಿ ಅಂಶಪತಿಯ ರಾಶಿಯ ದಿಕ್ಕಿನಿಂದ ಜೀವನವೃತ್ತಿಯಿಂದ ಪ್ರತಿಫಲ ಲಭಿಸುವುದು . ಅಂಶೇಶನು ಅದೇ ರಾಶಿಯಲ್ಲಿದ್ದರೆ, ನೋಡಿದರೆ, ಸ್ವದೇಶದಲ್ಲಿ ಅನ್ಯಗ್ರಹರ ಯುತಿದೃಷ್ಟಿ ಇದ್ದರೆ, ಪರದೇಶದಲ್ಲಿ ಸಂಪಾದನೆ, ವೃತ್ತಿಕಾರಕ ರಾಶಿ ಚರವಾದರೆ ದೂರ ದೇಶದಲ್ಲಿ ಜೀವನವೃತ್ತಿ, ಸ್ಥಿರವಾದರೆ ಹತ್ತಿರದಲ್ಲಿ, ಉಭಯವಾದರೆ, ಸ್ವಲ್ಪ ದೂರದೇಶದಲ್ಲಿ ವೃತ್ತಿಯು. ಹೀಗಲ್ಲದೆ ಅಂಶಕಾಧಿಪನ ಅಂಶ ಚರವಾದರೆ ದೂರ, ಸ್ಥಿರವಾದರೆ ಹತ್ತಿರ ಪ್ರವೃತ್ತಿ ಎಂದೂ ಹೇಳಿದ್ದಾರೆ. ೧೦ ನೇ ಭಾವ ಆ ಭಾವಪತಿ ಭಾವರಾಶೀಶನ ಅಂಶರಾಶಿ, ಅಂಶೇಶ, ಸ್ಥಿತಗ್ರಹ, ನೋಡುವ ಗ್ರಹ. ಇವರೆಲ್ಲರ ಬಲಾಬಲವರಿತು ಜೀವನ ವೃತ್ತಿ ಸಂಬಂಧ ಕಂಡುಹಿಡಿಯಬೇಕು. ಎಲ್ಲರ ಕೊಡುಗೆ ಜೀವನಕ್ಕಿರುವುದಿದೆ. ಒಬ್ಬ ಆಚಾರ್ಯರು ಭಾಗ್ಯ ಭಾಗ್ಯೇಶರ ಕರ್ಮ ಕರ್ಮೇಶ ಧನಭಾವ ಧನೇಶ ಇವರಿಂದ ಜೀವನ ವೃತ್ತಿ ಸಂಬಂಧವಿದೆ ಎಂದರು.

No comments:

Post a Comment