Friday, January 3, 2020

ಶೋಡಷ ಸಂಸ್ಕಾರಗಳು


 1.ಗರ್ಭಾಧಾನ 

ವಿವಾಹಾನಂತರ ಸತ್ಸಂತಾನಪ್ರಾಪ್ತಿಯಾಗಲು ಪುರುಷನು ತನ್ನ ಸಂತಾನಬೀಜವನ್ನು ಪತ್ನಿಯ ಕ್ಷೇತ್ರದಲ್ಲಿ ಸ್ಥಾಪಿಸುವ ಕ್ರಿಯೆಗೆ ಗರ್ಭಾಧಾನ(ಗರ್ಭ + ಆಧಾನ) ಎನ್ನುವರು. ವಧೂವರರ ವಿವಾಹವಾಗಿ ಭಾರ್ಯೆಯು ರಜಸ್ವಲೆಯಾದ ಮೇಲೆ ಮೂರು ದಿನ ಕಳೆದು ನಾಲ್ಕನೆಯ ದಿನ ಋತುಸ್ನಾತೆಯಾಗಬೇಕು. ಗರ್ಭಾಧಾನಕ್ಕೆ ರಜೋದರ್ಶನ ಮೊದಲ್ಗೊಂಡು ನಾಲ್ಕನೆಯ ದಿನದ ಅನಂತರ 6, 8, 10, 12, 14, 16 ಈ ಪ್ರಕಾರ ಯುಗ್ಮ ದಿನಗಳು ಪ್ರಶಸ್ತಗಳು. 5, 7, 9 ನೇ ದಿನಗಳು ಆಗಬಹುದು.ಈ ಯಾವುದಾದರೊಂದು ಶುಭದಿನದಲ್ಲಿ, ಶುಭಮುಹೂರ್ತದಲ್ಲಿ ಗರ್ಭಾಧಾನಸಂಸ್ಕಾರ ಹೋಮವನ್ನು ಮಾಡಬೇಕು. ಅದೇ ದಿನ ರಾತ್ರಿ ಸುಮುಹೂರ್ತದಲ್ಲಿ ಪತ್ನಿಯಿಂದ ಪತಿಯೂ, ಪತಿಯಿಂದ ಪತ್ನಿಯೂ ಪರಸ್ಪರ ಅನುರಾಗ ಪ್ರೀತಿವಿಶ್ವಾಸಗಳಿಂದ ಋತುದಾನ ಮಾಡಬೇಕು.ಇದಕ್ಕೆ "ಋತು ಸಂವೇಶನ" ಎನ್ನುತ್ತಾರೆ. ಪಿತೃ ಋಣವನ್ನು ತೀರಿಸಲು ಉತ್ತಮ ಸಂತಾನಪ್ರಾಪ್ತಿಗೆ ಮಾಡುವ ಕ್ಷೇತ್ರಸಂಸ್ಕಾರವೇ 'ಗರ್ಭಾಧಾನ ಸಂಸ್ಕಾರ' ಎನಿಸಿಕೊಳ್ಳುತ್ತದೆ. 


 2. ಪುಂಸವನಮ್ 


 'ಪುಂಸವನಮ್' ಎಂದರೆ ಗಂಡುಮಗುವಾಗಲಿ ಎಂದು ಮಾಡುವ ಸಂಸ್ಕಾರ. ಸವನಮ್ ಎಂದರೆ ಯಜ್ಞ. ಬೀಜಸಂಬಂಧಿ, ಗರ್ಭಸಂಬಂಧಿ ದೋಷನಿವಾರಣಪೂರ್ವಕ ವೀರ್ಯವತ್ತಾದ, ಬಲವತ್ತಾದ ಸಂತತಿಪ್ರಾಪ್ತಿಯಾಗಲು, ಗರ್ಭದ ಪುಷ್ಟಿಪೂರ್ವಕ ರಕ್ಷಣೆಗೆ ಮತ್ತು 'ಪುಮ್' ಸಂತಾನಪ್ರಾಪ್ತಿಗೆ "ಪುಂಸವನ ಸಂಸ್ಕಾರ"ವನ್ನು ಮಾಡಬೇಕು. "ಪುಮಾನ್ ಪ್ರಸೂಯತೇ ಯೇನ ಕರ್ಮಣಾ ತತ್ ಪುಂಸವನಮ್ ". ಗರ್ಭಧಾರಣವಾಗಿದೆ ಎಂದು ನಿಶ್ಚಯವಾದ ಮೇಲೆ ಧೃತಗರ್ಭಕ್ಕೆ 2, 4, 6, 8 ನೆಯ ತಿಂಗಳಲ್ಲಿ ಈ ಸಂಸ್ಕಾರವನ್ನು ಮಾಡಬೇಕು. ಕಾಲಾತೀತವಾದರೆ ಸೀಮಂತೋನ್ನಯನದೊಂದಿಗೆ ಪುಂಸವನ ಸಂಸ್ಕಾರವನ್ನು ಮಾಡಬೇಕು. 


 3. ಸೀಮಂತೋನ್ನಯನಮ್ :


 "ಸೀಮಂತ" ಎಂದರೆ ಬೈತಲೆ. ಅದನ್ನು ಮೇಲ್ಮುಖವಾಗಿ ಬಾಚುವುದಕ್ಕೆ ಸೀಮಂತೋನ್ನಯನಮ್ ಎನ್ನುತ್ತಾರೆ. ತಲೆಯ ಮೇಲಿರುವ ಪಂಚಸಂಧಿಗೆ "ಸೀಮಂತ" ಎನ್ನುವರು. ಅದನ್ನು ಉಜ್ಜುವುದರ ಮೂಲಕ ರಕ್ಷಣೆ ಮಾಡುವ ಸಂಸ್ಕಾರಕ್ಕೆ "ಸೀಮಂತೋನ್ನಯನಮ್" ಎನ್ನುವರು. ಈ ಸಂಸ್ಕಾರವನ್ನು ಗರ್ಭವ್ಯಕ್ತವಾದ ನಂತರ 4, 5, 6, 7, 8, 9 ನೆಯ ತಿಂಗಳುಗಳಲ್ಲಿ ಶುಭಮುಹೂರ್ತದಲ್ಲಿ ಮಾಡಬಹುದು. ಸೀಮಂತಕ್ಕೆ ಆಘಾತವಾದರೆ ಮನುಷ್ಯನು ಮೂರ್ಛಿತನಾಗುತ್ತಾನೆ. ಗರ್ಭವತಿಯಾದ ಸ್ತ್ರೀಯನ್ನು ಮತ್ತು ಗರ್ಭಸ್ಥ ಶಿಶುವನ್ನು ಮಾನಸಿಕ ವಿಚಾರ, ಆಚಾರ, ಆಹಾರ, ಶಾರೀರಿಕ ಹಾಗೂ ಬೌದ್ಧಿಕ ವಿಚಾರಗಳಲ್ಲಿ ಸರ್ವಾಂಗಪರಿಪೂರ್ಣವಾಗಿ ರಕ್ಷಿಸಲು ಮತ್ತು ಶಿಶುವಿನ ದೃಢಮನಸ್ಸು , ತೇಜಸ್ಸು , ಈಶ್ವರಭಕ್ತಿ , ಶಾಸ್ತ್ರ , ವಿದ್ಯಾವಿನಯಸಂಪನ್ನತೆಗೆ ಈ ಸಂಸ್ಕಾರವನ್ನು ಮಾಡಬೇಕು.ಇದು ಅತಿಮುಖ್ಯವಾದ ಸಂಸ್ಕಾರವಾಗಿದೆ. 


 4. ಜಾತಕರ್ಮ 


 ಮಗು ಹುಟ್ಟಿದ ಕೂಡಲೇ ನಾಭಿಚ್ಛೇದನಕ್ಕೆ ಮುಂಚೆ ಮಾಡುವ ಸಂಸ್ಕಾರವು ಜಾತಕರ್ಮ ಸಂಸ್ಕಾರ ಆಗಿದೆ. ಗರ್ಭಧಾರಣಾ ನಂತರ ನವಮಾಸ ಅಂದರೆ 30✘9=270ದಿನ ಪೂರ್ಣಗೊಂಡು "ದಶಮೇ ಮಾಸಿ" (ಹತ್ತನೇ ತಿಂಗಳಲ್ಲಿ 10 ದಿನ)= ಒಟ್ಟು 280 ದಿನವಾಗಿ ಮಗು ಹುಟ್ಟಿದೊಡನೆ ಹೊಕ್ಕಳ ಬಳ್ಳಿಯನ್ನು ಕತ್ತರಿಸುವ ಮೊದಲು ಜಾತಕರ್ಮ ಸಂಸ್ಕಾರ ಮಾಡಬೇಕು.ಬೀಜ ಮತ್ತು ಗರ್ಭದಿಂದ ಉಂಟಾದ ದೋಷಪರಿಮಾರ್ಜನ ಪೂರ್ವಕ ಆಯುಸ್ಸು, ಶ್ರೀಸಂಪತ್ತು ಅಭಿವೃದ್ಧಿಪೂರ್ವಕ ಶ್ರೀಪರಮೇಶ್ವರಪ್ರೀತ್ಯರ್ಥವಾಗಿ ಜಾತಕರ್ಮ ಸಂಸ್ಕಾರವನ್ನು ಮಾಡಬೇಕು.ಇದೂ ಈಗ ನಾಮಕರಣದ ಸಂಗಡ ಮುಂಚೆ ಮಾಡಲ್ಪಡುತ್ತದೆ.


 5.ನಾಮಕರಣ 


 ಶಿಶು ಜನನಾನಂತರ 12 ನೆಯ ದಿನದಲ್ಲಿ ನಾಮಕರಣ ಸಂಸ್ಕಾರ ಆಗಬೇಕು. ಹದಿಮೂರನೆಯ ದಿನವಾಗದು.ಹನ್ನೊಂದನೆಯ ದಿವಸವು ಆಗದೆಂಬುದಿಲ್ಲ.("ನಾಮಾಹ್ನಿ ದ್ವಾದಶೇ") ಅಪರಾಹ್ಣ ಕಾಲವಾಗದು. ಎಲ್ಲ ವ್ಯವಹಾರಗಳೂ ಹೆಸರಿನ ಮೂಲಕವೇ ನಡೆಯುವುದರಿಂದ ಮತ್ತು ಸಂಸ್ಕಾರ ಕರ್ಮಗಳಲ್ಲೂ ಹೆಸರು ಪ್ರಾಶಸ್ತ್ಯವನ್ನು ಹೊಂದುವುದರಿಂದ ಮೃದು, ಸುಲಲಿತ, ಗಂಭೀರ, ಸುಂದರ, ಉಚ್ಚಾರಸುಲಭ ಅಕ್ಷರಗಳಿಂದ ಕೂಡಿದ ಹೆಸರನ್ನು ಬುದ್ಧಿ, ಶರೀರಬಲ, ವಿದ್ಯೆ, ಸದ್ಗುಣ, ಸದಾಚಾರ ಲಭಿಸಲು ಭಗವಂತನನ್ನು ಧ್ಯಾನಿಸಿ ವಿಧಿಯುಕ್ತವಾಗಿ ಮಾಡುವ ಸಂಸ್ಕಾರವನ್ನು "ನಾಮಕರಣ" ಸಂಸ್ಕಾರ ಎನ್ನುವರು.ಯಾವುದಾದರೂ ವಸ್ತು ಅಥವಾ ಪಶುಪಕ್ಷಿಗಳ ಹೆಸರನ್ನು ಇಡಬಾರದು.ಕುಲದೇವತಾನಾಮ,ಮಾಸನಾಮ,ನಕ್ಷತ್ರನಾಮ ಮತ್ತು ವ್ಯಾವಹಾರಿಕನಾಮ ಎಂದು ನಾಲ್ಕು ಹೆಸರುಗಳನ್ನಿಡಬೇಕು.ಹಿಂದೆ ಹೇಳಿರುವ ದಿನಗಳಲ್ಲಿ ನಾಮಕರಣ ಮಾಡದಿದ್ದಲ್ಲಿ 3 ತಿಂಗಳೊಳಗೆ ಅಥವಾ ಉಪನಿಷ್ಕ್ರಮಣ ಅಥವಾ ಅನ್ನಪ್ರಾಶನದೊಂದಿಗೆ ಮಾಡುವುದು.  


6.ಉಪನಿಷ್ಕ್ರಮಣ 


 ಉಪನಿಷ್ಕ್ರಮಣವು ಜನನಾದಿ ನಾಲ್ಕನೆಯ ಮಾಸದಲ್ಲಾಗಬೇಕು."ಚತುರ್ಥೇ ಮಾಸೇ ನಿಷ್ಕ್ರಮಣಮ್". ಮಗುವನ್ನು ಮನೆಯಿಂದ ಪ್ರಪ್ರಥಮವಾಗಿ ಹೊರಗೆ ಕರೆದುಕೊಂಡು ದೇವಸ್ಥಾನಾದಿಗಳಿಗೆ ಕರೆದುಕೊಂಡು ಹೋಗಿ ದಿಕ್ಪಾಲಕರನ್ನು ಪೂಜಿಸಿ ನಮಸ್ಕರಿಸಿ, ದೇವರಲ್ಲಿ ಮತ್ತು ದಿಕ್ಪಾಲಕರಲ್ಲಿ ಸಂಪ್ರಾರ್ಥಿಸುವ ಸಂಸ್ಕಾರಕ್ಕೆ ಉಪನಿಷ್ತ್ರಮಣ ಸಂಸ್ಕಾರವೆನ್ನುವರು. "ನಾವು ಜಾಗ್ರತ್, ಸ್ವಪ್ನ , ಸುಷುಪ್ತ್ಯವಸ್ಥೆಗಳಲ್ಲಿದ್ದರೂ, ಎಲೈ ಸೂರ್ಯಚಂದ್ರ ಮತ್ತು ಇಂದ್ರಾದಿ ಅಷ್ಟಲೋಕಪಾಲಕರೇ ಈ ಮಗುವನ್ನು ನಿಮಗೆ ಸಮರ್ಪಿಸುತ್ತೇವೆ. ಇಂದ್ರಾದಿ ದೇವತೆಗಳೇ ನೀವು ರಕ್ಷಿಸಿರಿ " ಎಂದು ಸಂಪ್ರಾರ್ಥಿಸುವುದು. 


 7. ಅನ್ನಪ್ರಾಶನ 


 ಮಗುವಿನ ಜನನಾನಂತರ 6 ನೆಯ ತಿಂಗಳಲ್ಲಿ ( 5 ತಿಂಗಳ ನಂತರ 6 ತಿಂಗಳ ಒಳಗೆ) ಅನ್ನಪ್ರಾಶನ ಮಾಡಬೇಕು.("ಷಷ್ಠೇ ಮಾಸ್ಯಶನಮ್ ") ಮಗುವು ದುರ್ಬಲವಾಗಿದ್ದರೆ ಅಥವಾ ಅನ್ನವು ಜೀರ್ಣವಾಗುವಷ್ಟು ಪಚನಶಕ್ತಿ ಇಲ್ಲದಿದ್ದಲ್ಲಿ 8, 10, 12ನೆಯ ತಿಂಗಳಲ್ಲಿ ಅಥವಾ ಒಂದು ವರ್ಷ ಪೂರ್ಣವಾದ ಮೇಲೆ ಅನ್ನಪ್ರಾಶನವನ್ನು ಮಾಡುವುದು. 6 ನೆಯ ತಿಂಗಳು ಎಲ್ಲರಿಗೂ ಪ್ರಶಸ್ತ. ಹೆಣ್ಣು ಮಗುವಿಗೆ ಇದರ ಹೊರತಾಗಿ 7, 9 ನೆಯ ತಿಂಗಳು ಆಗಬಹುದು. ಇಂದ್ರಿಯ, ಆಯುಸ್ಸು , ತೇಜಸ್ಸು ಇತ್ಯಾದಿ ಪ್ರಾಪ್ತಿಗೆ ಮೊಸರನ್ನ (ದಧ್ಯೋದನಮ್ ಇಂದ್ರಿಯಕಾಮ:) ಜೇನು ತುಪ್ಪ ಅನ್ನ (ಮಧ್ವೋದನಮ್ ಆಯುಷ್ಕಾಮ:) ಹಾಲನ್ನ (ಕ್ಷೀರೋದನಮ್ ಪಶುಕಾಮ:) ತುಪ್ಪ ಮಿಶ್ರಿತ ಅನ್ನ (ಘೃತೋದನಮ್ ತೇಜಸ್ಕಾಮ:) ಈ ರೀತಿ ಮಿಶ್ರಿತ ಅನ್ನವನ್ನು ಚಿನ್ನ ಅಥವಾ ಕಂಚಿನ ಪಾತ್ರದಲ್ಲಿಟ್ಟು ಸುಮುಹೂರ್ತದಲ್ಲಿ ಚಿನ್ನದ ಚಮಚದಿಂದ (ಚಿನ್ನದ ಉಂಗುರದಿಂದ) ಊಟ ಮಾಡಿಸಬೇಕು. 


 8. ಕರ್ಣವೇಧನ 


 "ಕರ್ಣವೇಧ" ಎಂದರೆ ಕಿವಿಚುಚ್ಚುವುದು ಎಂದರ್ಥ.ಈ ಸಂಸ್ಕಾರವನ್ನು ಅನ್ನಪ್ರಾಶನಾನಂತರ 7, 8, 10 ಅಥವಾ 12 ನೆಯ ತಿಂಗಳಲ್ಲಿ ಮಾಡಬೇಕು.ಅಥವಾ 6 ನೇ ತಿಂಗಳಲ್ಲಿ ಅನ್ನಪ್ರಾಶನದೊಂದಿಗೆ ಮಾಡುವುದು. ಮಗುವಿನ ರಕ್ಷಣೆ, ಪುಷ್ಟಿ , ಆಯುಸ್ಸು , ಸಂಪತ್ತು ಮತ್ತು ಮೇಧಾ ಶಕ್ತಿಯ ವೃದ್ಧಿಗೋಸ್ಕರ ಹಾಗೂ ಭೂಷಣವನ್ನು ತೊಡುವುದಕ್ಕಾಗಿ ಕರ್ಣವೇಧನ ಸಂಸ್ಕಾರವನ್ನು ಸುಮುಹೂರ್ತದಲ್ಲಿ ಮಾಡುವುದು.(ಅಪಸ್ಮಾರ ಇತ್ಯಾದಿ ರೋಗಗಳಿಗೂ ಪ್ರತಿಬಂಧಕವಾಗುವುದು) ಕಿವಿಯಲ್ಲಿ ಕರ್ಣಕುಂಡಲವನ್ನು ಧರಿಸಬೇಕು. 


 9.ಚೌಲ  


ಚೌಲ=ಕ್ಷೌರ (ಚೂಡಾಕರ್ಮ) 'ಚೌಲ' ಎಂಬ ಶಬ್ದದ ವ್ಯುತ್ಪತ್ತಿ ಹೀಗಿದೆ."ಚೂಡಾ" ಎಂದರೆ ಶಿಖೆ. ಚೂಡಕ್ಕೆ ಮಾಡುವ ಸಂಸ್ಕಾರ ಚೌಡ. (ಲಡಯೋರಭೇದ:) ಲ ಕಾರ ಡ ಕಾರಗಳಿಗೆ ಅಭೇದವನ್ನು ಹೇಳಿದ್ದಾರೆ. ಆದ್ದರಿಂದ ಚೌಡ, ಚೌಲ ಎಂಬ ಶಬ್ದಗಳಿಂದ ಕರೆಯಲ್ಪಡುತ್ತದೆ. ಲಕಾರ ಳಕಾರಗಳಿಗೆ (ಲಳಯೋರಭೇದ:) ಅಭೇದವಿರುವುದರಿಂದಚೌಳ ಎಂಬ ಶಬ್ದವೂ ಪ್ರಯೋಗದಲ್ಲಿದೆ. ಚೌಲಸಂಸ್ಕಾರ ಹೋಮವನ್ನು ಜನನ ದೆಸೆಯಿಂದ 3 ನೇ ವರ್ಷದಲ್ಲಿ ಮಾಡಬೇಕು. 4, 6 ನೇ ವರ್ಷಗಳಲ್ಲಿ ಆಗದು. ಚೌಲ ಎಂದರೆ ಪ್ರಪ್ರಥಮವಾಗಿ ಕೇಶಮುಂಡನ ಮಾಡಿ ಶಿಖೆಯನ್ನು ಇಡುವುದು.ಅಥವಾ ಶಿಖೆಯನ್ನಿಟ್ಟು ಉಳಿದ ಭಾಗವನ್ನು (ಕೇಶ ಮುಂಡನ) ಬೋಳಿಸುವುದು. ಬಾಲಕನ ಆರೋಗ್ಯ, ಆಯುಸ್ಸು, ಬುದ್ಧಿ, ಶ್ರೀಸಂಪತ್ತು, ಅಭಿವೃದ್ಧಿಗೋಸ್ಕರ ಚೌಲಸಂಸ್ಕಾರ ಹೋಮಾನಂತರ 'ಮುಂಡನ' ತಂತ್ರವನ್ನು ಮಂತ್ರೋಕ್ತವಾಗಿ ಮಾಡುವುದು. 


 10. ಉಪನಯನಮ್ 


 ಉಪ ಅಂದರೆ ಸಮೀಪೇ ಎಂದರ್ಥ. ವೇದಾಭ್ಯಾಸಾರ್ಥಂ ಗುರೋ: ಸಮೀಪೇ ನಯನಮ್ =ಉಪನಯನಮ್. ವೇದಾಧ್ಯಯನಕ್ಕಾಗಿ ಗುರುವಿನ ಸಮೀಪಕ್ಕೆ ಕರೆದುಕೊಳ್ಳುವುದನ್ನು "ಉಪನಯನ ಸಂಸ್ಕಾರ" ಎನ್ನುವರು. जन्मना जायते जन्तु: संस्कारैर्द्विज उच्यते । विद्यया याति विप्रत्वं त्रिभि:श्रोत्रियलक्षणम् ।। (ಜನ್ಮನಾ ಜಾಯತೇ ಜಂತು: ಸಂಸ್ಕಾರೈರ್ದ್ವಿಜ ಉಚ್ಯತೇ। ವಿದ್ಯಯಾ ಯಾತಿ ವಿಪ್ರತ್ವಂ ತ್ರಿಭಿ:ಶ್ರೋತ್ರಿಯಲಕ್ಷಣಮ್।।) ತಂದೆ ಮತ್ತು ತಾಯಿ ಇಬ್ಬರೂ ಬ್ರಾಹ್ಮಣ ವರ್ಣದಲ್ಲಿ ಹುಟ್ಟಿದರೂ ದಂಪತಿಗಳಿಗೆ ಹುಟ್ಟುವುದು ಸಾಮಾನ್ಯ ಸಂತಾನವು.ಗರ್ಭಾಧಾನಾದಿ ಸಂಸ್ಕಾರಗಳಿಂದ ಸಂಸ್ಕೃತನಾಗಿ "ಉಪನಯನ" ಸಂಸ್ಕಾರವಾದಾಗ ಮಗುವನ್ನು "ದ್ವಿಜ" ಎಂದು ಕರೆಯಲಾಗುತ್ತದೆ.(द्विवारं जायते इति द्विज:) ದ್ವಿವಾರಂ ಜಾಯತೇ ಇತಿ ದ್ವಿಜ: . ಅಂದರೆ ಉಪನಯನ ಸಂಸ್ಕಾರವೇ ಮಗುವಿನ ಎರಡನೆಯ ಜನ್ಮ. ಇನ್ನು ವೇದವಿದ್ಯೆ ಕಲಿಯುವುದು ಮೂರನೆಯ ಜನ್ಮ ಎಂದು ಕರೆಯಲ್ಪಟ್ಟಿದೆ. ವೇದವಿದ್ಯೆಯನ್ನು "ಬ್ರಹ್ಮಜ್ಞಾನ" ಎಂದಿದ್ದಾರೆ. ಆದ್ದರಿಂದ ("ब्रह्म अणति इति ब्राह्मण:") ಬ್ರಹ್ಮ ಅಣತಿ ಇತಿ ಬ್ರಾಹ್ಮಣ: . (धातु- अण गतौ, ये ये गत्यर्थका: धातव: ते ज्ञानार्थका: अपि) ಗುರುವಿನಿಂದ ಸಾಂಗವಾಗಿ ವೇದವಿದ್ಯೆ ಸಿದ್ಧಿಮಾಡಿದವನನ್ನು "ಬ್ರಾಹ್ಮಣ" ಎಂದು ಕರೆಯುವರು. ವೇದಾಧ್ಯಯನಾನಂತರ "ವಿಪ್ರ", "ಬ್ರಾಹ್ಮಣ" ಎಂಬ ನಾಮಧೇಯ. ಸಂಸ್ಕಾರಗಳಿಂದ ಮತ್ತು ವೇದಾಧ್ಯಯನದಿಂದ ಸುಶೋಭಿತರಾದವರನ್ನು "ಶ್ರೋತ್ರಿಯ"ರು ಎನ್ನುವರು. ದ್ವಿಜತ್ವ (ಪುನ:ಹುಟ್ಟುವುದು) ಸಿದ್ಧಿಪೂರ್ವಕ ವೇದಾಧ್ಯಯನಕ್ಕೆ "ಅಥಾತೋ ಬ್ರಹ್ಮಜಿಜ್ಞಾಸಾ" ಎಂಬ ಶ್ರುತಿ ವಾಕ್ಯದಂತೆ ಅಧಿಕಾರ ಪ್ರಾಪ್ತಿಯಾಗಲು "ಉಪನಯನ ಸಂಸ್ಕಾರ ಮುಖ್ಯವಾಗಿದೆ.ವೇದಾಧ್ಯಯನ ಉಪಕ್ರಮವಾಗಿ ಗಾಯತ್ರೀ ಮಂತ್ರ ಸಿದ್ಧಿಗೆ ಉಪನಯನ ಸಂಸ್ಕಾರ ಅತಿಪ್ರಮುಖ ಸಂಸ್ಕಾರ. "ವೇದ" ಎಂದರೆ "ವಿದ ಜ್ಞಾನೇ" ಎಂಬ ಧಾತುವಿನಿಂದ ವ್ಯುತ್ಪತ್ತಿಯಾದ ಪದವು. ವೇದ ಎಂದರೆ ಜ್ಞಾನ ಎಂದರ್ಥ.ಯಾವುದನ್ನು (ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ ಎಂಬ ಐದು ಜ್ಞಾನೇಂದ್ರಿಯಗಳಿಂದ ಅಥವಾ ಅನುಮಾನ ಪ್ರಮಾಣದಿಂದ ತಿಳಿಯಲು ಅಸಾಧ್ಯವೋ ಅದನ್ನು ವೇದದಿಂದ ತಿಳಿಯಬಹುದು. ಆದ್ದರಿಂದ ವೇದವು ಅಸಾಧಾರಣ ಪ್ರಮಾಣವೂ ಅಪೌರುಷೇಯವೂ ಆಗಿದೆ.ಶ್ರೌತ ಸ್ಮಾರ್ತ ವಿಹಿತ ನಿತ್ಯಕರ್ಮಾನುಷ್ಠಾನ ಯೋಗ್ಯತೆಗೆ ಬ್ರಹ್ಮತೇಜಸ್ಸಿನ ಅಭಿವೃದ್ಧಿಗೆ "ಉಪನಯನ ಸಂಸ್ಕಾರ" ಮಾಡಬೇಕು. ಬುದ್ಧಿಯ ಪ್ರಚೋದನೆಗೆ ಗಾಯತ್ರೀ ಮಂತ್ರೋಪದೇಶಪೂರ್ವಕ ಗಾಯತ್ರ್ಯನುಷ್ಠಾನಕ್ಕೆ ಸುಮುಹೂರ್ತದಲ್ಲಿ ಮಾಡುವ ಉಪನಯನ ಸಂಸ್ಕಾರವಾಗಬೇಕು. ಉಪನಯನ ಸಂಸ್ಕಾರವನ್ನು "ಗರ್ಭಾಷ್ಟಮ" ಅಂದರೆ ಗರ್ಭದ ಒಂದು ವರ್ಷ ಸೇರಿಸಿ ಜನ್ಮತ: 7ನೇ ವರ್ಷದಲ್ಲಿ,5 ನೇ ವರ್ಷದಲ್ಲಿ ಅನ್ನಪ್ರಾಶನಕ್ಕೆ ವಿಧಿಸಿದ ನಕ್ಷತ್ರದಲ್ಲಿ ಮಾಡಬೇಕು. ಜನ್ಮತ:7, 8 ನೇ ವರ್ಷಗಳು ಉಪನಯನಕ್ಕೆ ಪ್ರಶಸ್ತವಾದ ವರ್ಷಗಳು. ತಪ್ಪಿದರೆ 9, 10 ನೇ ವರ್ಷಗಳೂ ಆಗಬಹುದು. ಕ್ಷತ್ರಿಯರಿಗೆ 11 ನೇ ವರ್ಷ, ವೈಶ್ಯರಿಗೆ 12 ನೇ ವರ್ಷದಲ್ಲಿ ಉಪನಯನ ಸಂಸ್ಕಾರವಾಗಬೇಕು. ಬ್ರಾಹ್ಮಣರಿಗೆ 16 ವರ್ಷ, ಕ್ಷತ್ರಿಯರಿಗೆ 21 ವರ್ಷ, ವೈಶ್ಯರಿಗೆ 25 ವರ್ಷಗಳ ಒಳಗಾದರೂ ಉಪನಯನವಾಗಬೇಕು. (ಇವು ಅಧಮಕಾಲಗಳು) ಉಪನಯನಕ್ಕೆ ತಂದೆ ಮತ್ತು ಪುತ್ರರಿಬ್ಬರಿಗೂ ತಾರಾನುಕೂಲ ನೋಡಬೇಕು. ಚಾರರೀತ್ಯಾ ಗರುಗ್ರಹನು ಸಂಸ್ಕಾರ್ಯ ಬಾಲಕನ ಜನ್ಮರಾಶಿಯಿಂದ 2, 5, 7, 9, 11 ನೇ ರಾಶಿಗಳಲ್ಲಿರುವಾಗ ಉಪನಯನ ಸಂಸ್ಕಾರ ಮಾಡಬಹುದು.ಬಾಲಕರಿಗೆ 4 ವಾ 5 ವರ್ಷವಾಗುವಾಗಲೇ ಜ್ಯೌತಿಷ್ಕರಲ್ಲಿ ಜಾತಕವನ್ನು ತೋರಿಸಿ "ಗುರುಬಲ" ಯಾವಾಗ ಇದೆಯೆಂದು ತಿಳಿದು ತತ್ಕಾಲ ಶುಭಮುಹೂರ್ತದಲ್ಲಿ ಉಪನಯನ ಸಂಸ್ಕಾರ ಮಾಡಿ ಮುಂದೆ उपनीय गुरु:शिष्यं शिक्षयेत् शौचमादित:। आचारमग्निकार्यं च सन्ध्याकरणमेव च ।। (ಉಪನೀಯ ಗುರು:ಶಿಷ್ಯಂ ಶಿಕ್ಷಯೇತ್ ಶೌಚಮಾದಿತ:। ಆಚಾರಮಗ್ನಿಕಾರ್ಯಂ ಚ ಸಂಧ್ಯಾಕರಣಮೇವ ಚ ।।) ತಂದೆ ಅಥವಾ ಗುರುಗಳು (ಆಚಾರ್ಯರು) ಬಾಹ್ಯ ಮತ್ತು ಆಭ್ಯಂತರ ಶೌಚ, ಶಿಷ್ಟಾಚಾರ, ಸಂಧ್ಯಾವಂದನೆ, ಅಗ್ನಿಕಾರ್ಯ ಇತ್ಯಾದಿಗಳನ್ನು ಉಪದೇಶಿಸಿ ತತ್ಕರ್ಮಾನುಷ್ಠಾನದಲ್ಲಿ ತತ್ಪರನಾಗುವಂತೆ ಮಾಡಿದಲ್ಲಿ ಉಪನಯನ ಸಂಸ್ಕಾರವು ಸತ್ಪ್ರಯೋಜನವಾಗಿ ಮುಂದೆ ಆ ವಟುವು "ಬ್ರಹ್ಮವಿದ್ ಬ್ರಾಹ್ಮಣ: ಸ್ಮೃತ:" ಎಂಬ ವಚನದಂತೆ ಬ್ರಹ್ಮನನ್ನು ತಿಳಿದು ಬ್ರಹ್ಮಜ್ಞಾನವನ್ನು ಹೊಂದುತ್ತಾನೆ.ತುರೀಯ ಪುರುಷಾರ್ಥಪ್ರಾಪ್ತಿಗೆ ಬ್ರಹ್ಮಜ್ಞಾನವು ಪ್ರಾಪ್ತವಾಗಬೇಕು. ತಂದೆಯಾದವನು ಕರ್ತವ್ಯಬುದ್ಧಿಯಿಂದ ಸಂಸ್ಕಾರದ ಮಹತ್ವವನ್ನು ತಿಳಿದು "ಪುತ್ರ" ನಿಗೆ ವಿಧಿಪ್ರಕಾರವಾಗಿ ಉಪನಯನ ಸಂಸ್ಕಾರವನ್ನು ನಿರ್ವಹಿಸಬೇಕು. 


 11.ಹೋತೃ 

12. ಶುಕ್ರಿಯ 

13.ಉಪನಿಷತ್ 

14.ಗೋದಾನ ಉಪನಯನಾನಂತರ ಶ್ರಾವಣ ಮಾಸ ಪೌರ್ಣಮೀ ತಿಥಿಯಂದು "ನೂತನೋಪಾಕರ್ಮ" ವನ್ನು ಮಾಡಿ ಮಾಘಮಾಸದ ಅರ್ಧದ ದೆಸೆಯಿಂದ ಮೊದಲು ಅಕ್ಷರಾರಂಭಕ್ಕೆ ಹೇಳಿದ 17 ನಕ್ಷತ್ರ ಮತ್ತು ಜ್ಯೇಷ್ಠಾ ನಕ್ಷತ್ರ ಈ 18 ನಕ್ಷತ್ರಗಳಲ್ಲಿ ವೇದಾಧ್ಯಯನ, ಶಾಸ್ತ್ರಾಧ್ಯಯನ ಪ್ರಾರಂಭಿಸಬೇಕು.ಪ್ರಾಜಾಪತ್ಯ ಕಾಂಡಾಧ್ಯಯನಾಂಗ ಹೋತೃ ವ್ರತ ಉಪಾಕರ್ಮ ಮಾಡಿ ಅಧ್ಯಯನಾನಂತರ ವಿಸರ್ಜನೆ. ಸೌಮ್ಯಕಾಂಡಾಧ್ಯಯನಾಂಗ ಶುಕ್ರಿಯ ವ್ರತ ಉಪಾಕರ್ಮ, ಅಧ್ಯಯನಾನಂತರ ಇದರ ವಿಸರ್ಜನೆ,ಅನಂತರ ಉಪನಿಷತ್ ವ್ರತ,ಆಮೇಲೆ ಗೋದಾನ ವ್ರತ.ಈ ಪ್ರಕಾರ ವ್ರತಗಳನ್ನು ಮಾಡಬೇಕೆಂದು ಉಪದೇಶಿಸಿದೆ. "ಕಾಂಡೇ ಕಾಂಡೇ ಚ ವ್ರತಚರ್ಯಾ" (ಬೋಧಾಯನ ಗೃಹ್ಯಸೂತ್ರ 3-2-3) ಪ್ರತಿಕಾಂಡಂ ವ್ರತಂ ಚರೇತ್ " ಎಂದೂ ವಚನವಿದೆ. ಗೋದಾನವ್ರತವು 16 ನೇ("ವರ್ಷೇತ್ವಿದಂ ಷೋಡಶೇ") ವರ್ಷದಲ್ಲಿ ಆಗಬೇಕು. ಮುಂದೆ ವರ್ಷನಿಯಮವಿಲ್ಲ.ಸಮಾವರ್ತನ ಸಂಸ್ಕಾರದಿಂದ ಮೊದಲು ಈ ಸಂಸ್ಕಾರಗಳನ್ನು ಮಾಡಬೇಕು.


 15.ಸಮಾವರ್ತನಮ್ 


 "ವಿದ್ಯಾಂತೇ ಗುರುಂ ಅರ್ಥೇನ ಸಂತೋಷ್ಯ ಸಮಾವರ್ತನಂ ಕುರ್ಯಾತ್" ಗುರುಕಲದಲ್ಲಿ ವೇದಾಧ್ಯಯನ,ಶಾಸ್ತ್ರಾಧ್ಯಯನಸಂಪನ್ನನಾಗಿ ಗುರುಗಳ ಅನುಗ್ರಹ ಅನುಮತಿಯಾದ ನಂತರ ಗುರುದಕ್ಷಿಣೆಯನ್ನು ಸಮರ್ಪಿಸಿ "ಸಮಸ್ತವಿದ್ಯಾಪ್ರಾಪ್ತಿರಸ್ತು" ಮುಂತಾದ ಆಶೀರ್ವಚನಗಳಿಂದ ಹರಸಲ್ಪಟ್ಟು ವ್ರತಸ್ನಾತಕನಾಗಿ 15 ನೆಯ ಸಮಾವರ್ತನ ಸಂಸ್ಕಾರದ ಆಚರಣೆ. ಅಧ್ಯಯನಗಳು ಪೂರ್ಣಗೊಂಡಾಗ ಗೃಹಸ್ಥಾಶ್ರಮಕ್ಕೆ ಸಿದ್ಧತೆ. ಕೇಶಾಂತ, ಸಮಾವರ್ತನ, ವೇದಾರಂಭ, ವೇದ ಮತ್ತು ಉಪನಿಷತ್ ಗಳನ್ನು ಗುರುಕುಲ ಅಥವಾ ಪಾಠಶಾಲೆಯಲ್ಲಿ 'ಕಲಿಕೆ. ಪ್ರತಿ ಶೈಕ್ಷಣಿಕ ಅವಧಿಯ ಆರಂಭದಲ್ಲಿ ಉಪಾಕರ್ಮ ಎಂಬ ಸಮಾರಂಭದಲ್ಲಿ ವೇದಾರಂಭ ಮಾಡಲಾಗುವುದು ಮತ್ತು ಪ್ರತಿ ಶೈಕ್ಷಣಿಕ ಅವಧಿಯ ಅಂತ್ಯದಲ್ಲಿ ಉಪಸರ್ಜನಮ್ ಎಂಬ ಮತ್ತೊಂದು ಸಮಾರಂಭದಲ್ಲಿ ಅಂತ್ಯಗೊಳಿಸಲಾಗುವುದು. ಕೇಶಾಂತ ಅಂದರೆ ಮೊದಲ ಕ್ಷೌರ. ಇದನ್ನು ಹುಡುಗನ 16 ನೆಯ ವಯಸ್ಸಿನಲ್ಲಿ ಒಂದು ಸಮಾರಂಭರೀತಿಯಲ್ಲಿ ನಡೆಸಲಾಗುತ್ತದೆ.(ಈಗ ಈ ಪದ್ದತಿ ಇಲ್ಲ) ಸಮಾವರ್ತನ (ಪದವಿ ಎಂದು ಅರ್ಥ) 'ಗುರುಕುಲದಲ್ಲಿ' ಅಥವಾ ಪಾಠಶಾಲೆಯಲ್ಲಿ ವೇದದ ಔಪಚಾರಿಕ ಶಿಕ್ಷಣದ ಕೊನೆಯಲ್ಲಿ ನಡೆಸುವ ಸಮಾರಂಭ. ಈ ಸಮಾರಂಭದಲ್ಲಿ ವಿದ್ಯಾರ್ಥಿದೆಸೆ (ಬ್ರಹ್ಮಚರ್ಯಾಶ್ರಮ) ಅಂತ್ಯವಾಯಿತು. ಇದು ಜೀವನದ ಗೃಹಸ್ಥಾಶ್ರಮಕ್ಕೆ ಪ್ರವೇಶದ ಸಂಸ್ಕಾರ ಸಮಾರಂಭ. ಧರ್ಮಸಿಂಧುವಿನಲ್ಲಿ- ವಿದ್ಯಾಭ್ಯಾಸ ಮುಗಿದ ನಂತರ ಗುರುವಿಗೆ ಸೂಕ್ತ ಗುರುದಕ್ಷಿಣೆ ಕೊಟ್ಟು ಅವರ ಅನುಮತಿ ಪಡೆದು ಸ್ನಾನ ಮಾಡಬೇಕು.ಇದಕ್ಕೆ “ವ್ರತಾಂತಸ್ನಾನ”ವೆನ್ನುವರು. ಈ ವ್ರತಾಂತಸ್ನಾನಕ್ಕೆ “ಸಮಾವರ್ತನ”ವೆಂದು ಹೇಳುತ್ತಾರೆ. ಸ್ನಾತಕನಲ್ಲಿ, “ವಿದ್ಯಾಸ್ನಾತಕ”, “ವ್ರತಸ್ನಾತಕ”, “ಉಭಯಸ್ನಾತಕ” ಹೀಗೆ ಮೂರು ವಿಧವಿದೆ. ಒಂದು, ಎರಡು, ಮೂರು ಮತ್ತು ನಾಲ್ಕು ವೇದಗಳನ್ನಾಗಲಿ ಅಥವಾ ವೇದಗಳ ಕಲವು ಭಾಗಗಳನ್ನಾಗಲಿ ಅಧ್ಯಯನ ಮಾಡಿ ಅರ್ಥವನ್ನು ತಿಳಿದು ಹನ್ನೆರಡು ವರ್ಷ ಬ್ರಹ್ಮಚರ್ಯ ಮಾಡಿದವನಿಗೆ “ವಿದ್ಯಾಸ್ನಾತಕ” ಎನ್ನುವರು. ಉಪನಯನ ವ್ರತ, ಸಾವಿತ್ರೀ ವ್ರತ, ವೇದವ್ರತಗಳನ್ನು ಅನುಷ್ಠಾನ ಮಾಡಿ ವೇದ ಸಮಾಪ್ತಿಯಾಗುವ ಮೊದಲೇ ಸ್ನಾನ ಮಾಡಿದವನು “ವ್ರತಸ್ನಾತಕ”. ಇನ್ನು ಹನ್ನೆರಡು ವರ್ಷ ಕಾಲ ಬ್ರಹ್ಮಚರ್ಯ ಸಮಾಪ್ತಿಮಾಡಿ ವೇದವನ್ನೂ ಮುಗಿಸಿ ಸ್ನಾನ ಮಾಡಿದವನು “ವಿದ್ಯಾವ್ರತೋಭಯ ಸ್ನಾತಕ”ನೆಂದಾಗುವನು. “ಉಪನಯನ ವ್ರತ”ವೆಂದರೆ ಉಪನಯನದ ನಂತರ ಮೇಧಾಜನನ ಪರ್ಯಂತ ಮಾಡುವ ತ್ರಿರಾತ್ರಾದಿ ದ್ವಾದಶ ರಾತ್ರಾದಿ ವ್ರತಾನುಷ್ಠಾನ ಮಾಡುವುದು. ಮೇಧಾಜನನಾಂತರ ಉಪಾಕರ್ಮದವರೆಗೆ ಮಾಡುವ ಬ್ರಹ್ಮಚರ್ಯಾನುಷ್ಟಾನಕ್ಕೆ “ಸಾವಿತ್ರೀ ವ್ರತ”ವೆನ್ನುವರು. ಅದರ ನಂತರ ವೇದಾಧ್ಯಯನಕ್ಕಾಗಿ ದ್ವಾದಶ ವರ್ಷಾದಿ ಕಾಲಾವಧಿಯ ವ್ರತಕ್ಕೆ “ವೇದವ್ರತ”ವೆನ್ನುವರು. “ವ್ರತಲೋಪ”ವಾಗಿದ್ದಲ್ಲಿ ಸಂಧ್ಯಾ, ಅಗ್ನಿಕಾರ್ಯ, ಭಿಕ್ಷ -ಇವುಗಳ ಲೋಪ; ಬ್ರಹ್ಮಚರ್ಯಾ ವ್ರತಲೋಪ ಪ್ರಾಯಶ್ಚಿತ ಮಾಡಿಕೊಂಡು , ಕೃಚ್ಛ್ರತ್ರಯವನ್ನು ಮುಗಿಸಿ, ಮಹಾವ್ಯಾಹೃತಿಹೋಮ ಮಾಡಿ ಸಮಾವರ್ತನ ಮಾಡತಕ್ಕದ್ದು. (ಧರ್ಮಸಿಂಧು)


 16.ವಿವಾಹ ಸಂಸ್ಕಾರ


ಹದಿನಾರನೇ ಸಂಸ್ಕಾರವು " ವಿವಾಹಸಂಸ್ಕಾರ ”. ಉಪನಯನಾನಂತರ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿ ಗುರುಗಳಿಂದ ಆಶೀರ್ವಾದ ಪೂರ್ವಕ ಅನುಮತಿ ಪಡೆದು ಯಥಾವಿಧಿ ಸ್ನಾನಮಾಡಿ ವಿಧಿವತ್ತಾಗಿ ಸಮಾವರ್ತನಸಂಸ್ಕಾರದಿಂದ ಸಂಸ್ಕೃತನಾಗಿ ದ್ವಿಜನು ಸುವರ್ಣದ (ಬ್ರಾಹ್ಮಣ - ಬ್ರಾಹ್ಮಣವರ್ಗದ) ಲಕ್ಷಣವಾಗಿರುವ (ಶಾಸ್ತ್ರೋಕ್ತ ಲಕ್ಷಣ) ಕವೃಯನ್ನು ವಿವಾಹವಾಗುವುದು . ಗುರುಣಾನುಮತ:ಸ್ನಾತ್ವಾ ಸಮಾವರ್ತ್ಯ ಯಥಾವಿಧಿ। ಉದ್ವಹೇತ ದ್ವಿಜೋ ಭಾರ್ಯಾಂ ಸವರ್ಣಾಂ ಲಕ್ಷಣಾನ್ವಿತಾಮ್।। ಪಿತೃಋಣ(ಸಾಲ)ದಿಂದ ವಿಮುಕ್ತನಾಗಲು ಸಂತಾನಪರಂಪರೆಯನ್ನು ಮುಂದುವರಿಸಲು ಮತ್ತು ಸತ್ಪುತ್ರನನ್ನು ಪಡೆದು, ಸನಾತನ ಸಂಸ್ಕೃತಿ, ಸಂಸ್ಕಾರಗಳನ್ನು ವೇದಶಾಸ್ತ್ರಾದಿ ಪರಂಪರೆಯನ್ನು ಮುಂದುವರಿಸಲು, ಪಿತೃಗಳಿಗೆ ಪಿಂಡಪ್ರದಾನಪೂರ್ವಕ ಶ್ರಾದ್ಧಾದಿಗಳನ್ನು ಮಾಡಲು ವಿವಾಹವನ್ನು ಮಾಡಿಕೊಳ್ಳಬೇಕು. ಬ್ರಹ್ಮಚರ್ಯ, ವಾನಪ್ರಸ್ಥ , ಸಂನ್ಯಾಸಾಶ್ರಮಿಗಳಿಗಿಂತ ಗೃಹಸ್ಥಾಶ್ರಮಿಗಳೇ ಶ್ರೇಷ್ಠರೆಂದು ಹೇಳಿರುತ್ತಾರೆ. ಯಾಕೆಂದರೆ ಇತರ ಮರು ಆಶ್ರಮಿಗಳಿಗೂ ಗೃಹಸ್ಥನೇ ಭಿಕ್ಷೆ ಮೊದಲಾದವುಗಳನ್ನು ಕೊಡಬೇಕು. ಯಥಾ ವಾಯುಂ ಸಮಾಶ್ರಿತ್ಯ ವರ್ತಂತೇ ಸರ್ವಜಂತವಃ। ತಥಾ ಗೃಹಸ್ಥಮಾಶ್ರಿತ್ಯ ವರ್ತಂತೇ ಸರ್ವ ಆಶ್ರಮಾ:।। ಯಸ್ಮಾತ್ತ್ರಯೋ ವ್ಯಾಶ್ರಮಿಣೋ ಜ್ಞಾನೇನಾನೇನ ಚಾನ್ವಹಮ್ । ಗೃಹಸ್ಥೇನೈವ ಧಾರ್ಯಂತೇ ತಸ್ಮಾಜ್ಜ್ಯೇಷ್ಠಾಶ್ರಮೋ ಗೃಹೀ।। ವಾಯುವಿಲ್ಲದೆ ಪ್ರಾಣಿಗಳು ಜೀವಧಾರಣೆ ಮಾಡಲಾರವು. ಅದರಂತೆ ಗೃಹಸ್ಥನಿಲ್ಲದೆ ಬ್ರಹ್ಮಚಾರಿಗಳು, ಪರಿವ್ರಾಜಕರು ಜೀವಿಸುವುದಿಲ್ಲ. ಜ್ಞಾನದಾನ, ಅನ್ನದಾನಗಳನ್ನು ಗೃಹಸ್ಥನೇ ಮಾಡಬೇಕಾಗಿರುವುದರಿಂದ ಬ್ರಹ್ಮಚಾರಿ, ವಾನಪ್ರಸ್ಥ, ಸಂನ್ಯಾಸಿಗಳು ಪರಾವಲಂಬಿಗಳು. ಗೃಹಸ್ಥಾಶ್ರಮವು ಶ್ರೇಷ್ಠ. ಈ ಆಶ್ರಮ ಸ್ವೀಕಾರದ ಸಂಸ್ಕಾರವೇ ವಿವಾಹ. ಎಂಟು ವಿಧವಾದ ವಿವಾಹಗಳಲ್ಲಿ " ಬ್ರಾಹ್ಮ ವಿವಾಹವು ಬ್ರಾಹ್ಮಣರಿಗೆ ಶ್ರೇಷ್ಠವು. ಇವು 16 ಪೂರ್ವಸಂಸ್ಕಾರಗಳು ಎಂದು ಋಷಿಗಳು ಹೇಳಿರುತ್ತಾರೆ. 'ವಿ'(ಉಪಸರ್ಗ) - ವಿಶೇಷವಾಗಿ 'ವಾಹ'(ವಹ ಪ್ರಾಪಣೇ) - ಹೊರುವುದು. 'ವಿವಾಹ' ಎಂದರೆ 'ಹೊಣೆಗಾರಿಕೆ, ಜವಾಬ್ದಾರಿಯನ್ನು ಹೆಚ್ಚಾಗಿ ಹೊರುವುದು ಎಂದರ್ಥ. 'ನಿರ್ವಾಹ' ಎಂದರೂ ನಿಭಾಯಿಸುವುದು ಎಂದರ್ಥ. ಕಂಡಕ್ಟರನನ್ನು ನಿರ್ವಾಹಕ ಎನ್ನುತ್ತಾರಷ್ಟೆ , ವಿವಾಹ – ಉದ್ವಾಹ ಪರಿಣಯ, ಪಾಣಿಗ್ರಹಣ ಎಂಬುವು ಪರ್ಯಾಯಪದಗಳು. ಸಂತಾನಪ್ರಾಪ್ತಿಯೇ ಅಂದರೆ ಮಕ್ಕಳನ್ನು ಪಡೆಯುವುದೇ ವಿವಾಹದ ಮುಖ್ಯೋದ್ದೇಶ. ಪಿತೃಋಣವನ್ನು ತೀರಿಸುವುದೇ ಪುತ್ರನ ಕರ್ತವ್ಯ. "ಪುತ್" ಎಂಬ ನರಕದಿಂದ ರಕ್ಷಿಸುವವನು 'ಪುತ್ರ'. “ಪ್ರಜಯಾ ಹಿ ಮನುಷ್ಯ ಪೂರ್ಣ:”, “ಏಷ ವಾ ಅನೃಣೋ ಯ:ಪುತ್ರೀ” ಮತ್ತು "ಪ್ರಜಾತಂತುಂ ಮಾ ವ್ಯವಚ್ಛೇಥ್ಸೀ:" ಎಂಬುದಾಗಿ ವೇದೋಪನಿಷತ್ತುಗಳಲ್ಲಿ ಹೇಳಲ್ಪಟ್ಟಿದೆ. ಮನುಷ್ಯನ ಬಾಳು ಪೂರ್ಣವಾಗುವುದು ಸಂತಾನಪ್ರಾಪ್ತಿಯಿಂದ, ಪಿತೃಋಣವನ್ನು ತೀರಿಸುವುದೇ ಎಲ್ಲರ ಕರ್ತವ್ಯ. “ ಅಪುತ್ರಸ್ಯ ಗತಿರ್ನಾಸ್ತಿ " ಅಂದರೆ ಪುತ್ರನಿಲ್ಲದವನಿಗೆ ಸದ್ಗತಿಯಿಲ್ಲವೆಂದು ಶಾಸ್ತ್ರದಲ್ಲಿ ಹೇಳಲ್ಪಟ್ಟಿದೆ. ಇದೇ ಅರ್ಥದಲ್ಲಿ ಮಹಾಕವಿ ಕಾಳಿದಾಸನು ರಘುವಂಶಮಹಾಕಾವ್ಯದಲ್ಲಿ “ ಪ್ರಜಾಯೈ ಗೃಹಮೇಧಿನಾಂ ” ಅಂದರೆ, “ ರಘುವಂಶದ ರಾಜರುಗಳು ಮಕ್ಕಳಿಗಾಗಿ ಮದುವೆಯಾಗುತ್ತಿದ್ದರು ” ಎಂದು ಬರೆದಿದ್ದಾನೆ. ಸ್ವರ್ಗವು ಯಜ್ಞ, ದಾನ, ತಪಸ್ಸುಗಳಿಂದಲೂ ಪಡೆಯಲು ಸಾಧ್ಯ. ಆದರೆ ಇದರಿಂದ ಪರಲೋಕದಲ್ಲಿ ಮಾತ್ರ ಸುಖ ದೊರೆಯುವುದು, ಸುಪುತ್ರನ ಆಟಪಾಟ, ತೊದಲುನುಡಿಗಳಿಂದ ಈ ಲೋಕದಲ್ಲೂ ಸುಖವು ಸಿಗುವುದಲ್ಲದೆ, ಸ್ವರ್ಗದಲ್ಲೂ ಸುಖವೂ ದೊರೆಯುವುದು. ಕ್ರೀಳಂತೌ ಪುತ್ರೈರ್ನಪ್ತೃಭಿಃ ಮೋದಮಾನೌ' ಮೊಮ್ಮಕ್ಕಳ ಸಂಗಡ ಆಡುತ್ತಾ 'ವಿಶ್ವಮಾಯುಃ' ಪೂರ್ಣವಾದ ಆಯುಸ್ಸನ್ನು 'ಸ್ವೇ ಗೃಹೇ ವ್ಯಶ್ನುತಮ್' ಸ್ವಂತಮನೆಯಲ್ಲಿ ಅನುಭವಿಸಿ ಎಂದು ಋಗ್ವೇದದಲ್ಲಿ ದಂಪತಿಗಳಿಗೆ ಆಶೀರ್ವಾದವು ಮಾಡಲ್ಪಟ್ಟಿದೆ. ಈ ವಿವಾಹವು ಎಂಟು ವಿಧವಾಗಿದೆ.ಈಗ ನಮ್ಮಲ್ಲಿ ರೂಢಿಯಿರುವುದು ಬ್ರಾಹ್ಮವಿವಾಹ.ಇದು ದೇಶಕಾಲಾಚಾರಾದಿಗಳಿಂದ ಬಹುವಿಧವಾಗಿದೆ. ಇದರಲ್ಲಿ ಮುಖ್ಯವಾದುದು ಕನ್ಯಾವರಣ, ನಿರೀಕ್ಷಣೆ, ಮಧುಪರ್ಕ, ಕನ್ಯಾದಾನ, ಅಕ್ಷತಾರೋಪಣ, ಮಾಂಗಲ್ಯಧಾರಣ, ವಿವಾಹಪ್ರಧಾನಹೋಮ, ಸಪ್ತಪದಿ, ಪವೇಶಹೋಮ ಮತ್ತು ನಾಕಬಲಿ. ಆಂಧ್ರಪ್ರಯೋಗರೀತಿಯಿಂದ ನಿರೀಕ್ಷಣೆಯೇ ಮುಹೂರ್ತ. ವರಪೂಜೆ ಕಾಶೀಯಾತ್ರೆಗಳನ್ನು ಬಿಟ್ಟರೂ ದೋಷವಿಲ್ಲ. ಕಾಶೀಯಾತ್ರೆಯನ್ನು ಸಮಾವರ್ತನೆಯಾದ ಕೂಡಲೇ ಮಾಡಬೇಕು. ಇದು ಜ್ಞಾನಾರ್ಜನೆಗಾಗಿ ಮಾಡತಕ್ಕದ್ದು. ಗುರುಕುಲದಲ್ಲಿ ಪೂರ್ಣ ವಿದ್ಯಾಭ್ಯಾಸವಾದ ಮೇಲೆ ಗುರುಗಳಿಗೆ ದಕ್ಷಿಣೆಯನ್ನು ಕೊಟ್ಟು ಅವರ ಅನುಮತಿ ಪಡೆದುಕೊಂಡು ಕಾಶೀಯಾತ್ರೆಗೆ ಹೋಗಿಬರಬೇಕು. ಆದುದರಿಂದ ಇದಕ್ಕೆ ಉದ್ದೇಶ ಮತ್ತು ಸಂಕಲ್ಪ ಹೇಳಲ್ಪಟ್ಟಿಲ್ಲ. ಹಿಂದೆ ಕಾಶಿಯು ವಿದ್ವಾಂಸರ ಆವಾಸಸ್ಥಾನವಾಗಿತ್ತು. ಅವರ ಸಂಪರ್ಕದಿಂದ ಜ್ಞಾನಾರ್ಜನೆ ಮಾಡುವುದೇ ಇದರ ಉದ್ದೇಶ. ಹೆಂಡತಿಯ ಸಂಗಡ ಹೋದರೆ ಇದು ಸಾಧ್ಯವಿಲ್ಲ. 'ವಿವಾಹೋ ವಿದ್ಯಾನಾಶಾಯ' ಎಂದೂ ಹೇಳುತ್ತಾರೆ. ಈಗ ಮದುವೆಗೆ ಎಲ್ಲ ಸಿದ್ಧತೆಯಾದ ಮೇಲೆ ಹೆಂಡತಿಯ ಸಂಗಡ ಹೋದರೆ ಇದು ಸಾಧ್ಯವೇ? ಕಾಶೀಯಾತ್ರೆಯೆಂಬ ಈ ಪ್ರಕರಣವನ್ನು ಆಚರಣೆಗೆ ಏಕೆ ತಂದಿದ್ದಾರೋ ಎಂಬುದು ತಿಳಿಯದು. ವರನು ಭಾವೀ ಮಾವನನ್ನು ಕಾಶೀಯಾತ್ರೆಗೆ ಹೋಗಲು ಅನುಮತಿಯನ್ನೇಕೆ ಕೇಳಬೇಕು? ಮಾವನು ಆಗ ಸಾಲಂಕೃತಳಾದ ನನ್ನ ಮಗಳನ್ನು ನಿನಗೆ ಕೊಡುತ್ತೇನೆ. 'ಅವಳನ್ನೂ ಕರೆದುಕೊಂಡು ಹೋಗು' ಎಂದು ಹೇಳುವುದು, ಔಚಿತ್ಯಕ್ಕೆ ದೂರವೆಂದು ನನಗೆ ಅನ್ನಿಸುತ್ತದೆ. ಕ್ರಿಯಾಪದವು “ ಗಚ್ಛಸ್ವ ” ಎಂದಿರುವುದೂ ಕೂಡ ಅಪಶಬ್ದವಾಗುತ್ತದೆ "ಗಚ್ಛ” ಎಂದಿರಬೇಕು. ಕಾಶೀಯಾತ್ರೆಯನ್ನು ಬಿಟ್ಟರೂ ಅನರ್ಥವೇನೂ ಆಗುವುದಿಲ್ಲ. "ಕನ್ಯಾವರಣ” ಎಂದರೆ ಕನ್ಯೆಯನ್ನು ವರಿಸುವುದು, ಆರಿಸುವುದು ಎಂದರ್ಥ. ಹಾಗೆಯೇ ಋತ್ವಿಗ್ವರಣ ಎನ್ನಬೇಕು. ತಿಳಿಯದವರು "ವರುಣ" ಎನ್ನುತ್ತಾರೆ . ವೇದಶಾಸ್ತ್ರವನ್ನು ಓದಿರುವ ಆಚಾರಸಂಪನ್ನರಾದ ವೃದ್ಧರಾದ 4-5 ಮಂದಿಬ್ರಾಹ್ಮಣರನ್ನು ಕನ್ಯೆಯ ಗೃಹಕ್ಕೆ ಕರೆದುಕೊಂಡು ಹೋಗಬೇಕು. ಆಮೇಲೆ ಕನ್ಯೆಯ ಮಾತಾಪಿತೃಗಳನ್ನು ಈ ವರನ ಭಾರ್ಯೆಯಾಗಲು ತಮ್ಮ ಪುತ್ರಿಯನ್ನು ವರಿಸುತ್ತೇವೆ. “ಭಾರ್ಯಾತ್ವಾಯ ವೃಣೀಮಹೇ” ಎಂದು ಹೇಳಬೇಕು. ಕ್ರಿಯಾಪದವೂ ಕರ್ತೃಪದವೂ ಬಹುವಚನದಲ್ಲಿವೆ. ಕನ್ಯಾಪಿತನು 'ವೃಣೇಧ್ವಂ', 'ದಾಸ್ಯಾಮಿ' ಎಂದು ಹೇಳಬೇಕು.ಅರ್ಥ ತಿಳಿಯದ ಪುರೋಹಿತರು ವಿರುದ್ಧವಾಗಿ ಹೇಳಿಸುತ್ತಾರೆ. ಕನ್ಯೆಯನ್ನು ಕೊಡಿ ಎಂದು ಯಾಚಿಸದಿದ್ದರೆ, ಕೊಡಬಾರದು. (ಹಣ, ಆಭರಣ, ಸೈಟು, ಮನೆ ಮುಂತಾದ ಏನನ್ನಾದರೂ ಯಾಚಿಸದೆ ಇದ್ದರೂ ಕೊಡಬಹುದು. ವಿದ್ಯೆ , ಅನ್ನ , ಕನ್ಯೆ ಈ ಮೂರನ್ನು ಯಾಚಿಸದಿದ್ದರೆ ಮೇಲೆ ಬಿದ್ದು ಕೊಡಬಾರದು ಎಂದರ್ಥ) ಈ ಧರ್ಮಸೂಕ್ಷವನ್ನರಿತ ಪರಮೇಶ್ವರನು, 'ಪಾರ್ವತಿಯನ್ನು ಕೊಡಿ ' ಎಂದು ಕೇಳುವುದಕ್ಕಾಗಿ, ಹಿಮವಂತನ ಬಳಿಗೆ ಸಪ್ತಋಷಿಗಳನ್ನು ಕಳುಹಿಸಿ ಕೊಡುತ್ತಾನೆ. ಅವರು ಪರಮೇಶ್ವರನಿಗೆ ನಿನ್ನ ಮಗಳನ್ನು ಕೊಡುವ ಅನುಗ್ರಹ ಮಾಡು ಎಂದು ಹಿಮವಂತನನ್ನು ಪ್ರಾರ್ಥಿಸುತ್ತಾರೆ . ಪಾರ್ವತಿಯ ತಪಸ್ಸಿಗೆ ಮೆಚ್ಚಿ , ತಾನೇ ವಿವಾಹಕ್ಕೆ ಒಪ್ಪಿಕೊಂಡಿದ್ದರೂ, ಶಿವನು ಶಿಷ್ಟಾಚಾರವನ್ನು ಮೀರಲಿಲ್ಲ. ಆದುದರಿಂದ ಕನ್ಯಾವರಣವೂ ಒಂದು ಅಂಗವೇ ಆಗಿದೆ. “ನಿರೀಕ್ಷಣಂ" ಎಂದರೆ ನೋಡುವುದು ಎಂದರ್ಥ, ಸುಮುಹೂರ್ತದಲ್ಲಿ ವಧೂವರರು ಗುಡಜೀರಿಕೆಗಳನ್ನು ಅಂದರೆ ಜೀರಿಗೆ - ಬೆಲ್ಲವನ್ನು ತಲೆಯ ಮೇಲೆ ಇಟ್ಟು ಒಬ್ಬರನ್ನೊಬ್ಬರು ನೋಡಬೇಕು.ತೆರೆಯನ್ನು ಹಿಡಿದಿರುವಾಗ, ಬ್ರಾಹ್ಮಣರು 'ಸೂರ್ಯಾ ಸಾವಿತ್ರೀಸೂಕ್ತ' ವನ್ನು ಪಠಿಸುತ್ತಿರಬೇಕು. ಮುತ್ತೈದೆಯರು ಮಂಗಳಗೀತೆಗಳನ್ನು ಹಾಡುತ್ತಿರಬೇಕು. ವಧೂವರರು ಸ್ಥಿರಮನಸ್ಕರಾಗಿ ಇಷ್ಟದೇವತೆಯನ್ನು ಸ್ಮರಿಸುತ್ತಿರಬೇಕು.ಆಗ ಮಂಗಳಾಷ್ಟಕಗಳನ್ನು ಹೇಳುವ ರೂಢಿಯಿದೆ . ಸುಮೂಹೂರ್ತ:, ಸಾವಧಾನಾ:, ಸುಲಗ್ನಂ ಸಾವಧಾನಾಃ, ಶ್ರೀಲಕ್ಷ್ಮಿನಾರಾಯಣಧ್ಯಾನಂ ಸಾವಧಾನಾ:' ಎಂದು ಹೇಳಬೇಕು. ಇದು ವಧೂವರರಿಗೆ ಎಚ್ಚರಿಕೆ ಕೊಡುವ ವಾಕ್ಯಗಳಾಗಿವೆ. ಒಳ್ಳೆಯ ಮುಹೂರ್ತ,ಒಳ್ಳೆಯ ಲಗ್ನ, ಎಚ್ಚರಿಕೆಯಿಂದ ಮನಸ್ಸನ್ನು ಅತ್ತಿತ್ತ ಹರಿಯಲು ಬಿಡದೆ ಲಕ್ಷ್ಮೀನಾರಾಯಣರು, ಸೀತಾರಾಮರು, ಪಾರ್ವತೀಪರಮೇಶ್ವರರು ಅಥವಾ ಲಕ್ಷ್ಮೀವೆಂಕಟೇಶ್ವರರನ್ನು ಧ್ಯಾನಮಾಡಿ ಎಂದು ಹೇಳುತ್ತಾರೆ. 'ಸಾವಧಾನ' ಎಂದರೆ ಎಚ್ಚರಿಕೆ. ಸುಮುಹೂರ್ತ, ಸುಲಗ್ನ ಎನ್ನುವುದು ತಪ್ಪು. ಮುಹೂರ್ತ: ಎಂಬುದು ಪುಲ್ಲಿಂಗಶಬ್ದ. ಸುಲಗ್ನಮ್ ಎಂಬುದು ನಪುಂಸಕಲಿಂಗದ ಶಬ್ದ. ಸಾವಧಾನಾಃ ಎನ್ನಬೇಕು. ಇಲ್ಲಿ “ಭವತ” ಎಂಬ ಕ್ರಿಯಾಪದವು ಅಧ್ಯಾಹಾರ ಮಾಡಲ್ಪಟ್ಟಿದೆ. ವಧೂವರರು ಇಷ್ಟದೇವತೆಯನ್ನು ಸ್ಮರಿಸುತ್ತಾ ಸ್ಥಿರ ಮತ್ತು ಶಾಂತಚಿತ್ತರಾಗಿದ್ದು ತರೆವಸ್ತ್ರ ಎಳೆಯಲ್ಪಟ್ಟ ಮೇಲೆ ಒಬ್ಬರ ಮೇಲೊಬ್ಬರು ಜೀರಿಗೆ ಬೆಲ್ಲವನ್ನು ಹಾಕಿ ಪರಸ್ಪರ ನೋಡಬೇಕು. ಇಲ್ಲಿ ಒಂದು ಅಚಾತುರ್ಯ ನಡೆಯುತ್ತದೆ. ಯಾರು ಮುಂಚೆ ಜೀರಿಗೆಬೆಲ್ಲ ಹಾಕುತ್ತಾರೋ ಅವರೇ ಗೆದ್ದಂತೆಯೂ ಮುಂದೆ ಅವರ ಮಾತೇ ನಡೆಯುತ್ತದೆಯೆಂದೂ ಯಾರೋ ಒಬ್ಬರು ಕಥೆಕಟ್ಟಿದ್ದಾರೆ. ಇದರಿಂದ ಇಬ್ಬರೂ ತಾನು ಮುಂದು ತಾನು ಮುಂದು ಎಂದು ಪೈಪೋಟಿ ಮಾಡುತ್ತಾ ಎರಚುವುದರಲ್ಲಿ ತತ್ಪರರಾಗಿರುತ್ತಾರೆ. ಬ್ಯಾಡ್ಮಿಂಟನ್ ಬಾಲನ್ನು ಹೊಡೆಯಲು ಸಿದ್ಧವಾಗಿದ್ದಂತೆ ಇರುತ್ತಾರೆ. ದೇವರ ಕಡೆ ಗಮನವಿರುವುದಿಲ್ಲ. ಅದಕ್ಕನುಗುಣವಾಗಿ ಎರಡು ಪಕ್ಷದವರೂ ಚಪ್ಪಾಳೆ ಮುಂತಾದವುದರಿಂದ ಹುರಿದುಂಬಿಸುತ್ತಾರೆ. ಇದು ಶುದ್ಧ ತಪ್ಪು ಮತ್ತು ಈ ಕಲ್ಪನೆಗೆ ಯಾವ ಆಧಾರವೂ ಇಲ್ಲ. ಗಂಡ ಮುಂಚೆ ಹಾಕಿ ಆಮೇಲೆ ಹೆಂಡತಿ ಹೇಳಿದಂತೆ ಕೇಳುವ ಎಷ್ಟೋ ಗಂಡುಗಳನ್ನು ನೋಡಿದ್ದೇನೆ. ಕಡೆಯಲ್ಲಿ ಹಾಕಿದ ಹೆಣ್ಣೆ ಗಂಡನ ಮೇಲೆ ಪ್ರಭುತ್ವ ಸಂಪಾದಿಸಿರುವುದೂ ಉಂಟು. ಏನು ಮಾಡುವುದು? ಹೀಗೆ ಎಷ್ಟೋ ಮೂಢನಂಬಿಕೆಗಳು ಬಂದು ಬಿಟ್ಟಿವೆ. ಈ ಮಧ್ಯೆ ಫೋಟೋದವರ ಸಡಗರ ಬೇರೆ. ಪುರೋಹಿತರು ದೂರ ಸರಿದು ತಮ್ಮ ತಲೆಬೀಳುವುದನ್ನು ತಪ್ಪಿಸಿಕೊಂಡು ಫೋಟೋಗ್ರಾಹಕರಿಗೆ ಅವಕಾಶ ಕೊಡಬೇಕು. ತಲೆ ತಪ್ಪಿಸಿಕೊಳ್ಳುವುದು ಎಂದರೆ ಬೇರೆ ಅರ್ಥವೂ ಇದೆ.

No comments:

Post a Comment